ಪತಂಜಲಿ, ಡಾಬರ್, ಇಮಾಮಿ ಸೇರಿ ಹಲವು ಜೇನುತುಪ್ಪ ನಿಜಕ್ಕೂ ಕಲಬೆರಕೆಯದ್ದು!

ನಾವು ಪ್ರತಿದಿನ ಆಹಾರದಲ್ಲಿ, ಸೌಂದರ್ಯವರ್ಧಕವಾಗಿ ಬಳಸೋ ಜೇನುತುಪ್ಪವನ್ನು ಶುದ್ಧ ಜೇನುತುಪ್ಪ ಎಂದೇ ಬಳಸಿರುತ್ತೇವೆ. ಅದರಲ್ಲೂ ಆರ್ಯುವೇದ ಕಂಪನಿಯ ಜೇನುತುಪ್ಪ ಎಂದರೇ ಪರಿಶುದ್ಧ ಎನ್ನುವ ನಮ್ಮ ಭ್ರಮೆಯನ್ನು ಕಳಚುವ ಕೆಲಸ ಕೇಂದ್ರದ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಮಾಡಿದೆ.

ಹೌದು, ದೊಡ್ಡ ದೊಡ್ಡ ಕಂಪನಿಗಳ ಜೇನುತುಪ್ಪ ಕಳಪೆ ಗುಣಮಟ್ಟದ್ದಾಗಿವೆ ಎಂದು ಕೇಂದ್ರದ ವಿಜ್ಞಾನ ಮತ್ತು ಪರಿಸರ ಕೇಂದ್ರ​ ವರದಿ ನೀಡಿದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವ ಜೇನುತುಪ್ಪ ಬ್ರ್ಯಾಂಡ್‌ಗಳಲ್ಲಿ ಹೆಚ್ಚಿನವು ಕಲಬೆರಕೆ ಜೇನನ್ನು ಗ್ರಾಹಕರಿಗೆ ಮಾರುತ್ತಿವೆ ಎಂಬ ಅಂಶ ಸಿಎಸ್‌ಇ ನಡೆಸಿರುವ ಅಧ್ಯಯನದಲ್ಲಿ ಬಹಿರಂಗವಾಗಿದೆ.

ದೇಶದ ಮಾರುಕಟ್ಟೆಗಳಿಂದ 13 ಜೇನುತುಪ್ಪದ ವಿವಿಧ ಬ್ರಾಂಡ್‌ಗಳ ಮೇಲೆ ನಡೆಸಿದ ತನಿಖೆಯನ್ನು ವರದಿ ಉಲ್ಲೇಖಿಸಿದೆ. ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು ಜೇನಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವು ಈ ಅಧ್ಯಯನದಿಂದ ತಿಳಿದು ಬಂದಿದ್ದು, ಗುಜರಾತ್‌ನಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು.

ಈ 13 ದೊಡ್ಡ ದೊಡ್ಡ ಕಂಪನಿಯ ಜೇನುತುಪ್ಪಗಳಲ್ಲಿ ಕೇವಲ ಮೂರೇ ಮೂರೇ ಕಂಪನಿಯ ಜೇನುತುಪ್ಪ ಮಾತ್ರ ಗುಣಮಟ್ಟದ ಟೆಸ್ಟ್‌ನಲ್ಲಿ ಪಾಸ್​ ಆಗಿವೆ. ಉಳಿದ 10 ಕಂಪನಿಗಳು ಕಲಬೆರಕೆಯ ಜೇನು ಮಾರಾಟ ಮಾಡುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದೆ.

ಸಿಎಸ್ಇ ಆಹಾರ ಸಂಶೋಧಕರು ಡಾಬರ್, ಪತಂಜಲಿ, ಬೈದ್ಯನಾಥ್, ಇಮಾಮಿ ಮತ್ತು ಝಂಡು ಸೇರಿದಂತೆ 13 ಬ್ರಾಂಡ್‌ಗಳ ಜೇನುತುಪ್ಪವನ್ನು ಆಯ್ಕೆ ಮಾಡಿ, ಅವುಗಳನ್ನು ಜೇನುತುಪ್ಪ ಎಂದು ಲೇಬಲ್ ಮಾಡಲು ರಾಷ್ಟ್ರೀಯ ಆಹಾರ ನಿಯಂತ್ರಣ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವ 18 ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ.

ಈ ವರದಿಗೆ ಸುಮ್ಮನಾಗದ ಸಿಎಸ್‌ಇ, ಜರ್ಮನಿಯ ಪ್ರಯೋಗಾಲಯವೊಂದರಲ್ಲಿ ಮುಂದುವರಿದ ದೇಶಗಳಲ್ಲಿ ಜೇನಿನ ಪರಿಶುದ್ಧತೆ ಪರಿಶೀಲನೆಗೆ ಬಳಸಲಾಗುವ ನ್ಯೂಕ್ಲಿಯರ್‌ ಮ್ಯಾಗ್ನೆಟಿಕ್‌ ರೆಸೊನೆನ್ಸ್‌ (ಎನ್‌ಎಂಆರ್‌) ಪರೀಕ್ಷೆಗೂ ಒಳಪಡಿಸಲು ನಿರ್ಧರಿಸಿತು. ಅಲ್ಲಿ ನಡೆದ ಪರೀಕ್ಷೆಯಲ್ಲೂ 13 ಬ್ರ್ಯಾಂಡ್‌ಗಳ ಪೈಕಿ 10 ಬ್ರ್ಯಾಂಡ್‌ಗಳ ಜೇನು ಶುದ್ಧವಲ್ಲ ಎಂಬ ರಿಸಲ್ಟ್ ಬಂದಿದೆ.

13 ಬ್ರಾಂಡ್‌ಗಳಲ್ಲಿ ಸಫೊಲಾ, ಮಾರ್ಕ್‌ಫೆಡ್ ಸೊಹ್ನಾ ಮತ್ತು ನೇಚರ್ ನೆಕ್ಟಾರ್ (ಎರಡು ಮಾದರಿಗಳಲ್ಲಿ ಒಂದು) ಈ 3 ಕಂಪನಿಯ ಜೇನುತುಪ್ಪ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿವೆ ಎಂದು ವರದಿ ಹೇಳಿದೆ.

“ನಾವು ಕೊರೊನಾ ಸಾಂಕ್ರಾಮಿಕದ ರೋಗದ ವಿರುದ್ಧ ಹೋರಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬ ಕಾರಣಕ್ಕಾಗಿ ಜೇನುತುಪ್ಪವನ್ನು ಸೇವಿಸುತ್ತಿದ್ದೇವೆ. ಆದರೆ, ಸಕ್ಕರೆಯೊಂದಿಗೆ ಕಲಬೆರಕೆ ಮಾಡಿದ ಜೇನುತುಪ್ಪವು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಸಿಎಸ್‌ಇ ಪ್ರಧಾನ ನಿರ್ದೇಶಕಿ ಸುನಿತಾ ನಾರಾಯಣ್ ಮಾಹಿತಿ ನೀಡಿದ್ದಾರೆ.

ಕಳೆದ ಜೂನ್​ ಮತ್ತು ಸೆಪ್ಟೆಂಬರ್​ ಅವಧಿಯಲ್ಲಿ ವಿಶ್ವದಾದ್ಯಂತಾ ಅತಿಹೆಚ್ಚಿನ ಸಂಖ್ಯೆಯಲ್ಲಿ ಜೇನುತುಪ್ಪ ಮಾರಾಟವಾಗಿವೆ. ಆದರೆ ಸಂಸ್ಥೆಯ ಈ ವರದಿಯನ್ನು ಕಂಪನಿಗಳು ತಳ್ಳಿಹಾಕಿವೆ.

ಝಂಡು ಶುದ್ಧ ಹನಿ ತಯಾರಕ, ಇಮಾಮಿ ಕಂಪನಿಗಳು, “ನಮ್ಮ ಜೇನುತುಪ್ಪವು ಭಾರತ ಸರ್ಕಾರ ಮತ್ತು ಅದರ ಅಧಿಕೃತ ಸಂಸ್ಥೆಗಳಾದ ಎಫ್‌ಎಸ್‌ಎಸ್‌ಎಐನಂತಹ ಎಲ್ಲಾ ಪ್ರೋಟೋಕಾಲ್ಗಳು ಮತ್ತು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ” ಎಂದು ಹೇಳಿವೆ.