ಪ್ರಿಯಕರನ ಧಾರಾಳತೆ ಪರೀಕ್ಷಿಸಲು 23 ಜನರ ಜತೆ ಡೇಟಿಂಗ್‌ಗೆ ಬಂದ ಹುಡುಗಿ!

ಬೀಜಿಂಗ್‌: ತನ್ನ ಸಂಭಾವ್ಯ ಗೆಳೆಯ ಎಷ್ಟು ಉದಾರಿ ಎಂದು ತಿಳಿಯಲು ಚೀನಾದ ಯುವತಿಯೊಬ್ಬಳು ಸ್ವಾರಸ್ಯಕರ ತಂತ್ರ ಪ್ರಯೋಗಿಸಿ ಸುದ್ದಿ ಮಾಡಿದ್ದಾಳೆ. ಏನು ಆ ಸ್ವಾರಸ್ಯಕರ ತಂತ್ರ ಅಂತೀರಾ? ಅದು ಸರಳ, ಮನಮೆಚ್ಚಿದ ಹುಡುಗನ ಜತೆ ರೊಮ್ಯಾಂಟಿಕ್‌ ಸಂಬಂಧ ಬೆಳೆಸಲು ಇಚ್ಛಿಸಿದ್ದ ಆ ಯುವತಿ, ಅದಕ್ಕೂ ಮೊದಲು ಆ ಹುಡುಗ ಎಷ್ಟು ದಿಲ್‌ದಾರ್‌ ಎಂದು ತಿಳಿಯಲು ಬಯಸಿ ರೆಸ್ಟೋರೆಂಟಿಗೆ ಕರೆದಿದ್ದಳು.

ಹುಡುಗ ಕ್ಸಿಯೊ ಲಿಯೊಗೆ ಆ ಹುಡುಗಿ ಇಷ್ಟ ಆಗಿದ್ದಳು. ಜತೆಯಲ್ಲಿರೊಮ್ಯಾನ್ಸ್‌ ಮಾಡುವ ಕಾತುರ ಹೆಚ್ಚಿತ್ತು. ಆನ್‌ಲೈನ್‌ನಲ್ಲಿಯೇ ಎಲ್ಲಾ ಮಾತುಕತೆ ಮುಗಿದಿದ್ದವು. ಆದರೆ ಒಮ್ಮೆಯೂ ಮುಖಾಮುಖಿ ಇರಲಿಲ್ಲ. ಅದಕ್ಕೆ ಹುಡುಗನ ಜತೆ ಡೇಟಿಂಗ್‌ ಫಿಕ್ಸ್‌ ಮಾಡಿದಳು ಹುಡುಗಿ. ಪಂಚತಾರಾ ಹೋಟೆಲ್‌ವೊಂದಕ್ಕೆ ಬರಲು ಹುಡುಗನಿಗೆ ಹೇಳಿದಳು.

ಹುಡುಗ ಖುಷಿಯಾಗಿ ಹೋದ. ಸಮಯಕ್ಕೆ ಸರಿಯಾಗಿ ಹೋಟೆಲ್‌ ಸೇರಿದ. ಉದ್ದನೆಯ ಟೇಬಲ್‌ ಸುತ್ತ ಕುಳಿತ 23 ಮಂದಿ ಎದ್ದು ನಿಂತು ಲಿಯೊನನ್ನು ಬರಮಾಡಿಕೊಂಡರು. ಇವರಲ್ಲಿ ಯಾರ ತನ್ನ ಮನಕದ್ದ ಹುಡುಗಿ ಎಂದು ಲಿಯೋಗೆ ಗೊಂದಲ. ಆಗ ಮುಂದೆ ಬಂದು ಹುಡುಗಿ ಕೈಚಾಚಿ ಪರಿಚಯ ಮಾಡಿಕೊಂಡಳು. ಆಗ ”ಇವರೆಲ್ಲ ಯಾರು? ಇಲ್ಲೇಕೆ ಇವರು?,” ಎಂದು ಪ್ರಶ್ನಿಸಿದ.

ಆಗ ನಗುತ್ತಲೇ ”ಅವರೆಲ್ಲ ನನ್ನ ಮನೆಯವರು, ಊಟ ಮಾಡಿ ಎದ್ದು ಹೋಗುತ್ತಾರೆ,” ಎಂದು ಉಲಿದಳು ಹುಡುಗಿ. ಹುಡುಗ ಮೌನವಾಗಿ 23 ಜನರ ಜತೆ ಕುಳಿತು ಊಟ ಮುಗಿಸಿದ. ಆ ಬಳಿಕ ಬಿಲ್‌ ಬಂತು. ಅದನ್ನು ಹುಡುಗಿ ತನ್ನ ಭಾವಿ ಗೆಳೆಯನತ್ತ ತಳ್ಳಿದಳು. ಹುಡುಗ ದಿಟ್ಟಿಸಿದ, ‘2 ಲಕ್ಷ 18 ಸಾವಿರ ರೂ. ಮೊತ್ತ’. ಬಿಲ್‌ ಕಂಡು ಎದೆ ನಡುಗಿತು. ತಡಬಡಿಸಿ ಎದ್ದು ನಿಂತ ಹುಡುಗ, ಟಾಯ್ಲೆಟ್‌ ಕಡೆ ಹೋಗಿ ಬರುವುದಾಗಿ ಹೇಳಿ ನಿಧಾನ ಹಿಂಬಾಗಿಲಿನಿಂದ ಪರಾರಿಯಾಗಿಬಿಟ್ಟ.

ಅಲ್ಲಿಗೆ ಹುಡುಗನ ಉದಾರತೆ ಬಿದ್ದು ಹೋಯಿತು. ಮುಗುಳ್ನಗುತ್ತಲೇ ಹುಡುಗಿ, ಮನೆಯವರತ್ತ ನೋಡಿದಳು. ಎಲ್ಲರೂ ಸೇರಿ ಬಿಲ್‌ ಮೊತ್ತ ಭರಿಸಿ ಜಾಗ ಖಾಲಿ ಮಾಡಿದರು. ಇದು ಜಾಣ ಹುಡುಗಿಯ ಜೀವನ ಸಂಗಾತಿ ಆಯ್ಕೆಯ ಪರಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಸಂಗ ಭಾರೀ ವೈರಲ್‌ ಆಗಿದೆ.