ಪ.ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಘರ್ಷಣೆ: ಒಬ್ಬ ಕಾರ್ಯಕರ್ತನ ಸಾವು..!

ಇಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಮೃತನನ್ನು ಪುಲಿನ್ ರಾಯ್ ಎಂದು ಗುರುತಿಸಲಾಗಿದ್ದು, ಲಾಠಿಚಾರ್ಜ್ ಸಮಯದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪ್ರತಿಭಟನಾ ನಿರತ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ನಿರ್ದಯವಾಗಿ ಲಾಠಿ ಚಾರ್ಜ್‌ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. “ನಮ್ಮ ಪಕ್ಷದ ಯುವ ವಿಭಾಗವು ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಯುವ ಮೋರ್ಚಾದ ಕಾರ್ಯಕರ್ತರು ಆಡಳಿತ ಭವನದತ್ತ ಸಾಗುತ್ತಿದ್ದರು. ಪೊಲೀಸರು ಯಾವುದೇ ಪ್ರಚೋದನೆಯಿಲ್ಲದೆ ಕೋಪಗೊಂಡು, ನಮ್ಮ ಕಾರ್ಯಕರ್ತರೊಬ್ಬರ ಸಾವಿಗೆ ಕಾರಣವಾಗುವಂತೆ ಲಾಠಿಚಾರ್ಜ್ ಮಾಡಿದ್ದಾರೆ. ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು” ಎಂದು ಹೇಳಿದರು.

ಸಾವಿರಾರು ಬಿಜೆಪಿ ಕಾರ್ಯಕರ್ತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ ಮಿನಿ ಸೆಕ್ರೆಟರಿಯಟ್ ಕಟ್ಟಡದ ಕಡೆಗೆ ಹೋಗಲು ಪ್ರಾರಂಭಿಸಿದಾಗ ಘರ್ಷಣೆ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದಾಗ ಲಾಠೀಚಾರ್ಜ್ ಮಾಡಬೇಕಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಒಂದು ವಾರದ ಹಿಂದೆ ಬಿಜೆಪಿಯು ಕಾರ್ಯಕ್ರಮವನ್ನು ಘೋಷಿಸಿದ್ದರಿಂದ ಸಿಲಿಗುರಿಯಲ್ಲಿ ಭಾರಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.

ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಿಲಿಗುರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಸಂಸದ ಮತ್ತು ರಾಷ್ಟ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ, “ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ” ಎಂದು ಕಿಡಿ ಕಾರಿದ್ದಾರೆ.

“ಬಿಜೆಪಿ ಅನಗತ್ಯವಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ. ಅವರು ಶಾಂತಿಯುತ ಪ್ರತಿಭಟನೆ ನಡೆಸಬಹುದಿತ್ತು” ಎಂದು ಟಿಎಂಸಿ ಸಂಸದ ಪ್ರೊಫೆಸರ್ ಸೌಗತಾ ರಾಯ್ ತಿಳಿಸಿದ್ದಾರೆ.