ಮಾಜಿ ಪ್ರಿಯಕರನ ಹೆಸರಲ್ಲಿ 1.25 ಕೋಟಿ ಪೀಕಿದ ಕಾಲೇಜು ಗೆಳತಿ ಸಿಕ್ಕಿಬಿದ್ದಿದೇ ರೋಚಕ!

ಬೆಂಗಳೂರು: ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವಂತೆ ಮಾಜಿ ಪ್ರಿಯಕರನ ಜತೆಗಿನ ಹಳೇ ಪ್ರೇಮ ಸಂಬಂಧವನ್ನೇ ನೆಪವಾಗಿಟ್ಟುಕೊಂಡು ಮಹಿಳೆಗೆ ಬ್ಲ್ಯಾಕ್​ಮೇಲ್​ ಮಾಡಿದ ಕಿಲಾಡಿ ಲೇಡಿಯೊಬ್ಬಳು ಆಕೆಯಿಂದ ಬರೋಬ್ಬರಿ 1.25 ಕೋಟಿ ರೂ. ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾಳೆ.

ವೈಟ್​ಫೀಲ್ಡ್​ನಲ್ಲಿ ವಾಸವಿರುವ ಮಹಿಳೆ ಮೋಸ ಹೋದವರು. ಸಂತ್ರಸ್ತೆಯ ಪತಿ ನೀಡಿದ ದೂರಿನ ಮೇರೆಗೆ ಅಪರ್ಣಾ ಅಲಿಯಾಸ್ ಅನು ಎಂಬಾಕೆಯನ್ನು ವೈಟ್​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. 2019ರಿಂದ ಈವರೆಗೂ ಹಂತಹಂತವಾಗಿ ಪತಿ ಬ್ಯಾಂಕ್ ಖಾತೆಯಿಂದ 1.25 ಕೋಟಿ ರೂ. ಆರೋಪಿತೆಯ ಖಾತೆಗೆ ಸಂತ್ರಸ್ತೆ ವರ್ಗಾವಣೆ ಮಾಡಿದ್ದಾಳೆ. ಹಣಕ್ಕಾಗಿ ಕಿರುಕುಳ ಮಿತಿಮೀರಿದಾಗ ಗಂಡನ ಬಳಿ ವಿಷಯ ಬಾಯ್ಬಿಟ್ಟಿದ್ದು, ಆರೋಪಿತೆ ಜೈಲು ಸೇರಿದ್ದಾಳೆ.

ಆಗಿದ್ದೇನು?: 10 ವರ್ಷದ ಹಿಂದೆ ಮಹಿಳೆಗೆ ಉದ್ಯಮಿ ಜತೆ ಮದುವೆಯಾಗಿದೆ. ದಂಪತಿಗೆ 8 ವರ್ಷದ ಪುತ್ರನಿದ್ದಾನೆ. ಮಹಿಳೆ ವಿವಾಹಕ್ಕೂ ಮುನ್ನ ಕೋಲಾರ ಮೂಲದ ಮಹೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಪಾಲಕರ ಇಷ್ಟದಂತೆ ಉದ್ಯಮಿ ಜತೆ ಮದುವೆಯಾಗಿತ್ತು. ಈ ವಿಚಾರ ಕಾಲೇಜಿನಲ್ಲಿ ಸ್ನೇಹಿತೆಯಾಗಿದ್ದ ಅಪರ್ಣಾಗೆ ತಿಳಿದಿತ್ತು. ಇದನ್ನೇ ನೆಪವಾಗಿಟ್ಟುಕೊಂಡು 2019ರ ಜುಲೈನಲ್ಲಿ ಮಹಿಳೆಗೆ ಮಾಜಿ ಪ್ರಿಯಕರ ಮಹೇಶ್ ಹೆಸರಿನಲ್ಲಿ ವಾಟ್ಸ್ ಆಪ್ ಸಂದೇಶ ಕಳುಹಿಸಿದ್ದಳು. ನಂತರ ಎರಡೇ ದಿನಕ್ಕೆ ಅನು ಅಲಿಯಾಸ್ ಅಪರ್ಣಾ ಎಂಬ ಹೆಸರಿನಲ್ಲಿ ಇನ್ನೊಂದು ನಂಬರ್​ನಿಂದ ಕರೆ ಮಾಡಿ ‘ನಾನು ಮಹೇಶ್​ನ ಮಾಜಿ ಪ್ರಿಯತಮೆ. ನೀನು ಮಹೇಶ್​ಗೆ ಮೆಸೇಜ್ ಮಾಡುತ್ತಿರುವ ವಿಚಾರ ಸೇರಿ ಎಲ್ಲವೂ ನನಗೆ ಗೊತ್ತಿದೆ. ನಾವಿಬ್ಬರೂ ಸ್ನೇಹಿತೆಯರಾಗೋಣ’ ಎಂದು ನಂಬಿಸಿದ್ದಳು. ಹೀಗಾಗಿ ಮಹಿಳೆ, ಆಕೆಯ ಜತೆ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದಳು. ಮಹೇಶ್ ಎಂಬ ಹೆಸರಿನಲ್ಲೂ ಹಾಗೂ ಅಪರ್ಣಾ ಹೆಸರಿನಲ್ಲೂ ಮಹಿಳೆ ಜತೆಗೆ ಸ್ನೇಹಿತೆ ಚಾಟ್ ಮಾಡುತ್ತಿದ್ದಳು.

ಕೆಲ ದಿನಗಳ ಬಳಿಕ ಮಹೇಶ್ ಹೆಸರಿನಲ್ಲೇ ಮಹಿಳೆಗೆ ಕರೆ ಮಾಡಿದ್ದ ಅಪರ್ಣಾ, ‘ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇವೆ. ನೀನು 1 ಲಕ್ಷ ರೂ.ಗಳನ್ನು ನನ್ನ ಖಾತೆಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ, ನಾನು ನೀನು ಮಾಜಿ ಪ್ರೇಮಿಗಳು, ನನಗೂ ನಿನಗೂ ಮದುವೆಗೂ ಮೊದಲೇ ಸಂಬಂಧವಿತ್ತು ಎಂದು ಬಿಂಬಿಸಿ, ಫೋಟೋಗಳನ್ನು ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಳು. ಪ್ರಿಯಕರನೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂದು ಭಾವಿಸಿ ಭಯಗೊಂಡ ಮಹಿಳೆ, ಆರೋಪಿತೆ ಕೇಳಿದಾಗಲೆಲ್ಲ ಹಂತಹಂತವಾಗಿ ಒಟ್ಟು 1.25 ಕೋಟಿ ರೂ. ವರ್ಗಾವಣೆ ಮಾಡಿದ್ದಾಳೆ. ಆ ಬಳಿಕವೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆ ನಿರಾಕರಿಸಿದ್ದಾಳೆ. ಈ ವೇಳೆ ಅಶ್ಲೀಲವಾಗಿ ಮಾರ್ಪಾಡು ಮಾಡಲಾದ ಆಕೆಯ ಫೋಟೋ ಕಳುಹಿಸಿದ್ದಳು.

ಪತ್ನಿಯ ಕೌನ್ಸೆಲಿಂಗ್ ಮಾಡಿದ ಪತಿ

ಪತ್ನಿ ಇತ್ತೀಚೆಗೆ ಆತಂಕದಲ್ಲಿರುವುದನ್ನು ಗಮನಿಸಿದ್ದ ಪತಿ, ಆಕೆಯೊಂದಿಗೆ ಆಪ್ತ ಸಮಾಲೋಚನೆ ಮಾಡಿದ್ದರು. ಅಪರಿಚಿತರು ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿರುವ ಸಂಗತಿಯನ್ನು ಹೇಳಿಕೊಂಡಿದ್ದಳು. ಬ್ಯಾಂಕ್ ಖಾತೆ ಪರಿಶೀಲಿಸಿದಾಗ 1.25 ಕೋಟಿ ರೂ. ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್ ಹಾಗೂ ಅಪರ್ಣಾ ವಿರುದ್ಧ ದೂರು ಕೊಟ್ಟಿದ್ದು, ತನಿಖೆ ಕೈಗೊಂಡಾಗ ಸ್ನೇಹಿತೆ ಕೃತ್ಯ ಬಯಲಾಗಿದೆ. ಆರೋಪಿತೆ ಇದೇರೀತಿ ಹತ್ತಾರು ಮಂದಿಗೆ ಕೋಟ್ಯಂತರ ರೂ. ವಂಚಿಸಿರುವ ಅನುಮಾನವಿದೆ. ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಸತ್ಯಾಂಶ ಹೊರಬರಲಿದೆ. ಯಾರಾದರೂ ವಂಚನೆಗೆ ಒಳಗಾಗಿದ್ದರೆ ದೂರು ಕೊಡುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.