ನಾನು ಸರ್ವಾಧಿಕಾರಿಯಾಗಲು ಇಚ್ಚಿಸುತ್ತೇನೆ: ವಿಜಯ್ ದೇವರಕೊಂಡ ವಿವಾದಾತ್ಮಕ ಹೇಳಿಕೆ

ತೆಲುಗು ಉದಯೋನ್ಮುಖ ನಟ ವಿಜಯ್ ದೇವರಕೊಂಡ ಸಾರ್ವರ್ತ್ರಿಕ ವಯಸ್ಕ ಮತದಾನದ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, “ಮತ ಚಲಾಯಿಸುವ ಹಕ್ಕನ್ನು ಎಲ್ಲರಿಗೂ ನೀಡಬಾರದು” ಎಂದು ಹೇಳಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.

ಫಿಲ್ಮ್‌ ಕಂಪ್ಯಾನಿಯನ್‌ಗಾಗಿ ಭಾರದ್ವಾಜ್ ರಂಗನ್ ಮತ್ತು ಅನುಪಮಾ ಚೋಪ್ರಾ ಅವರು ವಿಜಯ್ ದೇವರಕೊಂಡರವರ ಸಂದರ್ಶನ ನಡೆಸುತ್ತಿದ್ದಾಗ “ಮತ ಚಲಾಯಿಸಲು ಎಲ್ಲರಿಗೂ ಅವಕಾಶ ನೀಡಬೇಕು ಎಂಬುದರಲ್ಲಿ ನನಗೆ ಒಪ್ಪಿಗೆಯಿಲ್ಲ. ಯಾಕೆಂದರೆ, ಹಣ ಮತ್ತು ಮದ್ಯಕ್ಕಾಗಿ ತಮ್ಮ ಮತವನ್ನು ಮಾರಿಕೊಳ್ಳುತ್ತಿದ್ದಾರೆ. ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಏಕೆ ಭಾಗವಹಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಅವರಿಗೆ ಗೊತ್ತಿಲ್ಲ. ವಿದ್ಯಾವಂತರು ಹೆಚ್ಚಾಗಿ ಪಾಲ್ಗೊಳ್ಳಬೇಕು” ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಒಂದು ಉದಾಹರಣೆ ನೀಡಿದ ವಿಜಯ್ ದೇವರಕೊಂಡ, “ನೀವು ಒಂದು ವಿಮಾನದಲ್ಲಿ ಬಾಂಬೆಗೆ ಹೋಗಬೇಕು ಎನ್ನುವಾಗ, ಯಾರು ವಿಮಾನವನ್ನು ಚಲಾಯಿಸಬೇಕು ಎಂದು ನಾವೆಲ್ಲರೂ ನಿರ್ಧರಿಸುತ್ತೇವೆಯೇ? ಆ ವಿಮಾನದಲ್ಲಿ ಯಾರು ಚಲಾಯಿಸಬೇಕು ಎಂಬುದನ್ನು ನಿರ್ಧರಿಸಲು ವಿಮಾನದಲ್ಲಿರುವ 300 ಜನರಿಗೆ ಅವಕಾಶ ನೀಡಬೇಕೇ? ಇಲ್ಲ. ಯಾರು ಹೆಚ್ಚು ಸಮರ್ಥರು ಅಥವಾ ಯಾರು ವ್ಯವಹಾರವನ್ನು ಅರ್ಥ ಮಾಡಿಕೊಳ್ಳುತ್ತಾರೆ ಅಥವಾ ವಿಮಾನವನ್ನು ಚಲಾಯಿಸಲು ಉತ್ತಮ ವ್ಯಕ್ತಿ ಯಾರೆಂದು ನಿರ್ಧರಿಸಲು ವಿಮಾನಯಾನ ಸಂಸ್ಥೆಗಳಂತಹ ದಕ್ಷ ಏಜೆನ್ಸಿಗೆ ಅವಕಾಶ ನೀಡುತ್ತೇವೆ” ಎಂದು ವಿವರಿಸಿದರು.

“ನಾನು, ಶ್ರೀಮಂತರಿಂದ ಮಾತ್ರ ಮತ ಚಲಾವಣೆಯಾಗುವುದರ ಪರ ಇಲ್ಲ. ಬದಲಾಗಿ ಹಣ ಮತ್ತು ಮದ್ಯಕ್ಕೆ ಮಾರಿಕೊಳ್ಳದ ವಿದ್ಯಾವಂತ ಜನರಿಂದ ಮತ ಚಲಾವಣೆ ಆಗಬೇಕು. ಹಣ ಮತ್ತು ಮದ್ಯದ ಆಧಾರದ ಮೇಲೆ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ, ಸರ್ವಾಧಿಕಾರಿ ವ್ಯವಸ್ಥೆಯ ಭಾಗವಾಗುವುದಕ್ಕೆ ಇಚ್ಚಿಸುವುದಾಗಿ” ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಜನರು ಮದ್ಯ ಮತ್ತು ಹಣಕ್ಕಾಗಿ ಮತ ಚಲಾಯಿಸುವ ಚುನಾವಣೆಯ ಪರ ನಾನು ನಿಲ್ಲುವುದಿಲ್ಲ. ನಾನು ಒಬ್ಬ ಸರ್ವಾಧಿಕಾರಿಯಾಗಲು ಬಯಸುತ್ತೇನೆ. ನೀವು ಬಯಸುವ ಬದಲಾವಣೆ ಆಗಬೇಕಾದರೆ ಇದು ಉತ್ತಮ ಮಾರ್ಗ ಎಂಬುದು ನನ್ನ ಅಭಿಪ್ರಾಯ. ನಾನು ಒಳ್ಳೆಯ ಉದ್ದೇಶವನ್ನು ಹೊಂದಿದ್ದೇನೆ. ನಿಮಗೆ ಯಾವುದು ಒಳ್ಳೆಯದು ಎಂದು ನಿಮಗೆ ತಿಳಿದಿಲ್ಲ. ಹಾಗಾಗಿ ನಾನು ಹೇಳುವುದಕ್ಕೆ ಬದ್ದರಾಗಿ. 5-10 ವರ್ಷಗಳಲ್ಲಿ ಎಲ್ಲಾ ಸಮಸ್ಯೆಯನ್ನು ಇದು ತೀರಿಸಲಿದೆ” ಎಂದು ಹೇಳಿದರು.

ಅದಾಗ್ಯೂ ಪ್ರಜಾಪ್ರಭುತ್ವದ ಮೌಲ್ಯಗಳ ಅಜ್ಞಾನ ಮತ್ತು ಬಲಪಂಥೀಯ ಚಿಂತನೆಯತ್ತ ಚಲಿಸುವ ಈ ಪ್ರವೃತ್ತಿಯ ಕಾರಣಕ್ಕಾಗಿ ವಿಜಯ್ ದೇವರಕೊಂಡ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ತೀವ್ರವವಾಗಿ ಟೀಕಿಸಿದ್ದಾರೆ. ಇತರರಿಗೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಯಾವ ಆಧಾರದ ಮೇಲೆ ನಿರ್ಧರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

“ರಾಜಕೀಯ ವಿರೋಧಿ ಜನರು ನಿಧಾನವಾಗಿ ಬಲಪಂಥೀಯ ಸರ್ವಾಧಿಕಾರದ ಕಡೆಗೆ ನಿಧಾನವಾಗಿ ಚಲಿಸುತ್ತಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ” ಟ್ವೀಟ್ ಮಾಡಿದ್ದಾರೆ.

“ಭಾರತವು ತನ್ನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರಶ್ನಿಸುವಲ್ಲಿ ನಿರತವಾಗಿದೆ. ಆದರೆ ಮಿ.ಅರ್ಜುನ್ ರೆಡ್ಡಿ ಅವರು ತಮ್ಮದೇ ಆದ ಲೋಕದಲ್ಲಿದ್ದಾರೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.