3 ಬಾರಿ ಪೇಪರ್ ಕಪ್ನಲ್ಲಿ ಕಾಫಿ-ಟೀ ಕುಡಿದಾಗ 75,000 ಮೈಕ್ರೋ ಪ್ಲಾಸ್ಟಿಕ್ ಕಣ ದೇಹ ಸೇರುತ್ತವೆ..!
ಒಬ್ಬ ವ್ಯಕ್ತಿ ಮೂರು ಬಾರಿ ಪೇಪರ್ ಕಪ್ನಲ್ಲಿ ಟೀ ಅಥವಾ ಕಾಫಿ ಕುಡಿದಾಗ ಆತನ ದೇಹದೊಳಗೆ 75,000 ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ತನ್ನ ಸಂಶೋಧನೆಯಲ್ಲಿ ಹೇಳಿದೆ.
ಪೇಪರ್ ಕಪ್ಗಳಿಂದ ದೇಹದೊಳಗೆ ಎಷ್ಟು ಪ್ಲಾಸ್ಟಿಕ್ ಕಣಗಳು ಸೇರುತ್ತವೆ ಎನ್ನುವ ಕುರಿತು ಸಂಶೋಧನೆ ನಡೆಸಿರುವ ಐಐಟಿ ಈ ಶಾಕಿಂಗ್ ವರದಿಯನ್ನು ಹೊರಹಾಕಿದೆ. ಈ ಬಗ್ಗೆ ಮಾತನಾಡಿರುವ ಐಐಟಿ ಖರಗ್ಪುರ್ನ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯೆಲ್, ಪೇಪರ್ ಕಪ್ಗಳ ಮೇಲೆ ಹೈಡ್ರೋಫೋಬಿಕ್ ಪದರ ಇರುತ್ತದೆ. ಅದನ್ನು ಹೆಚ್ಚಾಗಿ (ಪ್ಲಾಸ್ಟಿಕ್)ಪಾಲಿಥೈಲಿನ್ ನಿಂದ ಮಾಡಲಾಗಿರುತ್ತದೆ. ಕೆಲವು ಬಾರಿ ಕೋ ಪಾಲಿಮರ್ಸ್ಗಳಿಂದ ಮಾಡಲಾಗಿರುತ್ತದೆ. ಕಪ್ಗೆ ಬಿಸಿಪಾನೀಯ ಸುರಿದಾಗ 15 ನಿಮಿಷಗಳಲ್ಲಿ ಈ ಪದರ ಪಾನೀಯದೊಂದಿಗೆ ಕರಗುತ್ತದೆ ಎಂದಿದ್ದಾರೆ.
ನಮ್ಮ ರಿಸರ್ಚ್ನ ಪ್ರಕಾರ ಕೇವಲ 15 ನಿಮಿಷಗಳಲ್ಲಿ ಕಪ್ನೊಳಗಿನ 100 ಎಮ್.ಎಲ್ ಪಾನೀಯದಲ್ಲಿ ಸುಮಾರು 25,000 ಮೈಕ್ರಾನ್ ಗಾತ್ರದ ಮೈಕ್ರೋ ಪ್ಲಾಸ್ಟಿಕ್ ಬೆರೆಯುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನದಲ್ಲಿ ಮೂರು ಬಾರಿ ಕಾಫಿ ಅಥವಾ ಟೀ ಸೇವನೆ ಮಾಡುತ್ತಾರೆ. ಹೀಗೆ ಮೂರು ಬಾರಿ ಪೇಪರ್ ಕಪ್ನಲ್ಲಿ ಬಿಸಿಪಾನೀಯ ಸೇವಿಸಿದಾಗ ಕಣ್ಣಿಗೆ ಕಾಣದ 75,000 ಮೈಕ್ರೋ ಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹ ಸೇರುತ್ತವೆ ಎಂದಿದ್ದಾರೆ.