50 ಪೈಸೆಯ ಶಾಂಪೂ ಮಾರಿ 500 ಕೋಟಿ ದುಡಿದ ಕಥೆ..!

ಮನಸ್ಸಿದ್ದರೆ ಮಾರ್ಗ, ಹನಿಗೂಡಿದರೆ ಹಳ್ಳ ಎಂಬ ಮಾತುಗಳಿಗೆ ಉದಾಹರಣೆಯಾಗಿ ಹೇಳಬಹುದಾದ ಹೆಸರು -ಸಿ.ಕೆ. ರಂಗನಾಥನ್ ಅವರದು. ಈತ ಬೇರೇ ಯಾರೂ ಅಲ್ಲ, ಶಾಂಪೂ ಸೇರಿದಂತೆ ಹಲವು ಸೌಂದರ್ಯವರ್ಧಕ ವಸ್ತುಗಳನ್ನು ಉತ್ಪಾದಿಸುವ ಕೆವಿನ್ ಕೇರ್ ಕಂಪನಿಯ ಸಂಸ್ಥಾಪಕ. 50 ಪೈಸೆಗೆ ಒಂದರಂತೆ ಸಿಗುತ್ತಿತ್ತಲ್ಲ ಚಿಕ್ ಶಾಂಪೂ, ಅದನ್ನು ತಯಾರಿಸಿದ್ದು ಇವರೇ! 50 ಪೈಸೆಗೆ ಒಂದು ಶಾಂಪೂ ಪ್ಯಾಕ್ ಮಾರುತ್ತಲೇ ಅದನ್ನು ಈತ 500 ಕೋಟಿಯ ಉದ್ಯಮ ಆಗುವಂತೆ ಮಾಡಿದ ರೀತಿ ಅಮೋಘ. ರಂಗನಾಥನ್ ಅವರ ಯಶೋಗಾಥೆಯನ್ನು ಈಗ ಎಂಬಿಎ ತರಗತಿಗಳಲ್ಲಿ ಕಡ್ಡಾಯ ಅನ್ನುವಂತೆ ಬೋಧಿಸಲಾಗುತ್ತಿದೆ. ತಾನು ನಡೆದುಬಂದ ದಾರಿಯನ್ನು ಕುರಿತು, ರಂಗನಾಥನ್ ಅವರೇ ಹೇಳಿಕೊಂಡಿರುವ ಮಾತುಗಳ ಭಾವಾನುವಾದ ಇಲ್ಲಿದೆ…

*****
”ನಮ್ಮದು ತಮಿಳುನಾಡಿನ ಕಡಲೂರು ಜಿಲ್ಲೆಗೆ ಸಮೀಪದ ಒಂದು ಹಳ್ಳಿ. ನಮ್ಮ ತಂದೆಯ ಹೆಸರು ಚಿನ್ನಿ ಕೃಷ್ಣನ್. ನಾಲ್ಕು ಗಂಡು, ಎರಡು ಹೆಣ್ಣು ಮಕ್ಕಳು ಮತ್ತು ಹೆತ್ತವರು- ಹೀಗೆ ಎಂಟು ಜನರಿದ್ದ ತುಂಬು ಕುಟುಂಬ ನಮ್ಮದು. ಕೃಷಿಯ ಜೊತೆಗೆ, ಟಾಲ್ಕ್ ಪೌಡರ್, ಟಾನಿಕ್ ಗಳನ್ನು ಮೆಡಿಕಲ್ ಸ್ಟೋರ್ ಗಳಿಂದ ತಂದು ಅದನ್ನು ಹಳ್ಳಿಗಳಲ್ಲಿ ಮಾರಾಟ ಮಾಡುವ ಕೆಲಸವನ್ನೂ ಅಪ್ಪ ಮಾಡುತ್ತಿದ್ದರು. ನಾನಿಲ್ಲಿ ಹೇಳುತ್ತಿರುವುದು ೭೦ರ ದಶಕದ ಮಾತು. ಆ ದಿನಗಳಲ್ಲಿ ಟಾಲ್ಕ್ ಪೌಡರ್, ಜೇನುತುಪ್ಪ, ಹೇರ್ ಆಯಿಲ್, ಟಾನಿಕ್ ನಂಥ ಉತ್ಪನ್ನಗಳು ದೊಡ್ಡ ಬಾಕ್ಸ್/ ಬಾಟಲಿಗಳಲ್ಲಿ ಮಾತ್ರ ಸಿಗುತ್ತಿದ್ದವು. ಸಹಜವಾಗಿಯೇ ಅವುಗಳ ಬೆಲೆಯೂ ಹೆಚ್ಚೇ ಇರುತ್ತಿತ್ತು. ”ಪೌಡರ್ ಮತ್ತು ಹೇರ್ ಆಯಿಲ್ ಹಾಕಿಕೊಂಡು ಚೆನ್ನಾಗಿ ಕಾಣಿಸಬೇಕು ಎನ್ನುವ ಆಸೆ ಬಡವರಿಗೂ ಇರ್ತದೆ. ಈ ವಸ್ತುಗಳನ್ನು ಚಿಕ್ಕ ಚಿಕ್ಕ ಪ್ಯಾಕ್ ಗಳಲ್ಲಿ ತುಂಬಿ ಮಾರ್ಕೆಟ್ ಗೆ ಬಿಟ್ಟರೆ ಲಾಭವಿದೆ” ಎಂಬುದು ಅಪ್ಪನ ವಾದವಾಗಿತ್ತು. ಆದರೆ, ಸೇಲ್ಸ್ ಮ್ಯಾನ್ ಥರದ ಕೆಲಸ ಮಾಡುತ್ತಿದ್ದ ಅವರ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಆಗ ಅಪ್ಪ ಏನು ಮಾಡಿದರು ಗೊತ್ತೇ? ಬ್ಯಾಂಕ್ ನಲ್ಲಿ ಸಾಲ ಪಡೆದು, ಸಣ್ಣ ಗಾತ್ರದ ಪ್ಯಾಕ್ ನಲ್ಲಿ ಶಾಂಪೂ ತುಂಬುವ ಕೆಲಸವನ್ನು ಮನೆಯಲ್ಲಿಯೇ ಆರಂಭಿಸಿದರು. ಹಾಗೆ ಶುರುವಾದದ್ದೇ ವೆಲ್ವೆಟ್ಟೆ ಶಾಂಪೂ. ಅದನ್ನು ಹಳ್ಳಿಗಳಲ್ಲಿ ಮಾರಾಟ ಮಾಡಬೇಕಿತ್ತು. ಅಪ್ಪನದ್ದು ದಿನಕ್ಕೊಂದು ಯೋಚನೆ. ಆದರೆ ಯಾವುದನ್ನೂ ಪಟ್ಟು ಹಿಡಿದು
ಮಾಡುತ್ತಿರಲಿಲ್ಲ. ಪರಿಣಾಮ; ಶಾಂಪೂ ಮಾರಾಟದಿಂದ ಹೆಚ್ಚಿನ ಲಾಭ ಸಿಗಲಿಲ್ಲ.

ಹೀಗಿರುವಾಗಲೇ, ಅನಾರೋಗ್ಯದ ಕಾರಣಕ್ಕೆ ಅಪ್ಪ ನಿಧನರಾದರು. ಅದರ ಬೆನ್ನಿಗೇ ಬಂದ ಬ್ಯಾಂಕ್ ಅಧಿಕಾರಿಗಳು, ನಿಮ್ಮ ತಂದೆ ಎರಡು ಲಕ್ಷ ರೂ. ಸಾಲ ಪಡೆದಿದ್ದಾರೆ. ಅದನ್ನು ತೀರಿಸದಿದ್ದರೆ ಮನೆ ಅಥವಾ ಜಮೀನನ್ನು ವಶಕ್ಕೆ ಪಡೆಯುತ್ತೇವೆ ಅಂದರು! ಈ ವೇಳೆಗೆ ಇಬ್ಬರು ಅಣ್ಣಂದಿರು ಡಾಕ್ಟರ್ ಆಗಿದ್ದರು. ಒಬ್ಬ ಲಾಯರ್ ಆಗಿದ್ದ. ಆದರೆ ಸಾಲ ತೀರಿಸುವಷ್ಟು ಹಣ ನಮ್ಮಲ್ಲಿ ಇರಲಿಲ್ಲ. ಆಗ, ಡಾಕ್ಟರ್ ಆಗಿದ್ದವರಿಬ್ಬರೂ ಆ ವೃತ್ತಿಗೆ ಗುಡ್ ಬೈ ಹೇಳಿ, ಶಾಂಪೂ ತಯಾರಿಕೆ ಮತ್ತು ಮಾರಾಟವನ್ನೇ ಮುಂದುವರಿಸಲು ನಿರ್ಧರಿಸಿದರು. ಅವರಿಗೆ ಸಹಾಯಕನಾಗಿ ನಾನೂ ಸೇರಿಕೊಂಡೆ.

ಹೊಸ ಕೆಲಸ ಆರಂಭಿಸಿದ ಎರಡೇ ವರ್ಷಗಳಲ್ಲಿ, ವೆಲ್ವೆಟ್ಟೆ ಶಾಂಪೂ ಉತ್ಪನ್ನದ ಹಂಚಿಕೆಯನ್ನು ಗೋದ್ರೆಜ್ ಕಂಪನಿ ವಹಿಸಿಕೊಂಡಿತು. ಪರಿಣಾಮ, ತಿಂಗಳೊಪ್ಪತ್ತಿನಲ್ಲಿ ದೇಶದ ಮೂಲೆಮೂಲೆಗೂ ವೆಲ್ವೆಟ್ಟೆ ಶಾಂಪೂ ತಲುಪಿತು. ವಾರ್ಷಿಕ ಗಳಿಕೆಯ ಮೊತ್ತ ನಿರೀಕ್ಷೆ ಮೀರಿ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ, ಉತ್ಪನ್ನ ಮತ್ತು ಮಾರಾಟದ ಗುಣಮಟ್ಟವನ್ನು ಹೇಗೆಲ್ಲಾ ಹೆಚ್ಚಿಸಿಕೊಳ್ಳಬಹುದು ಎಂದು ನನಗೆ ದಿನಕ್ಕೊಂದು ಐಡಿಯಾ ಬರುತ್ತಿತ್ತು. ಅದನ್ನೆಲ್ಲಾ ತಕ್ಷಣವೇ ಅಣ್ಣಂದಿರಿಗೆ ಹೇಳುತ್ತಿದ್ದೆ. ಅದೇನು ಕಾರಣವೋ; ಅವರು ನನ್ನ ಮಾತನ್ನು ಕೇಳುತ್ತಲೇ ಇರಲಿಲ್ಲ. ಕೆಲದಿನಗಳ ನಂತರ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಬಂತು. ತಕ್ಷಣವೇ ಅಲ್ಲಿಂದ ಕಳಚಿಕೊಂಡೆ.

ಅಣ್ಣಂದಿರ ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್ ನಲ್ಲಿ ಓಡಾಡುತ್ತಿದ್ದವ ನಾನು. ಆದರೆ ಈಗ ಬೀದಿಗೆ ಬಂದಿದ್ದೆ. ಉಳಿತಾಯದ ಹಣವೆಂದು ಕೂಡಿಟ್ಟಿದ್ದ 15000 ಮಾತ್ರ ಜೊತೆಗಿತ್ತು. ನನಗೆ ಚೆನ್ನಾಗಿ ಗೊತ್ತಿದ್ದುದು ಶಾಂಪೂ ತಯಾರಿಕೆಯ ಕೆಲಸ ಮಾತ್ರ. ಅಣ್ಣಂದಿರು ಈಗಾಗಲೇ ಆ ಬಿಸಿನೆಸ್ ನಲ್ಲಿ ಇರುವುದರಿಂದ, ಕೋಳಿ ಫಾರ್ಮ್, ಲವ್ ಬರ್ಡ್ಸ್/ ಅಕ್ವೇರಿಯಂ ಮಾರಾಟದ ಬಿಜಿನೆಸ್ ಆರಂಭಿಸಲು ಯೋಚಿಸಿದೆ. ಆದರೆ ಮನಸ್ಸು ಮಾತ್ರ, ಶಾಂಪೂ ಉದ್ಯಮದಲ್ಲೇ ನಿನ್ನ ಭವಿಷ್ಯ ಇದೆ ಎಂದು ಪಿಸುಗುಡುತ್ತಿತ್ತು.

ಸುದೀರ್ಘ ಯೋಚನೆಯ ನಂತರ, ಏನಾಗುತ್ತದೋ ಆಗಿಬಿಡಲಿ ಎಂದುಕೊಂಡು ಕಡಲೂರಿಗೆ ಹತ್ತಿರವಿರುವ ಕನ್ನಿ ಕೋಯಿಲ್ ಎಂಬ ಊರಲ್ಲಿ ನಾಲ್ಕು ಜನ ನೌಕರರನ್ನು ಜೊತೆಗಿಟ್ಟುಕೊಂಡು ಚಿಕ್ (CHIK)ಹೆಸರಿನ ಶಾಂಪೂ ತಯಾರಿಕೆಯ ಕೆಲಸ ಆರಂಭಿಸಿದಾಗ ನನಗೆ 22 ವರ್ಷ. ( ಚಿನ್ನಿ ಕೃಷ್ಣನ್ ಎಂಬ ಅಪ್ಪನ ಹೆಸರಿನ ಹ್ರಸ್ವ ರೂಪವೇ CHIK ) ಇದು 1983ರ ಮಾತು. ಫ್ಯಾಕ್ಟರಿಯಾಗಿ ಬದಲಾಗಿದ್ದ ರೂಮಿನ ಬಾಡಿಗೆ 300 ರೂಪಾಯಿ, 1200 ಅಡ್ವಾನ್ಸ್. ನನ್ನ ಮತ್ತು ನೌಕರರ ಓಡಾಟಕ್ಕೆ ಒಂದು ಸೈಕಲ್. 3000 ರುಪಾಯಿಗೆ ಶಾಂಪೂ ಪ್ಯಾಕ್ ಮಾಡುವ ಯಂತ್ರ ಖರೀದಿ! – ಮೊದಲ ವ್ಯವಹಾರದಲ್ಲಿ ನಾನು ಬಂಡವಾಳ ಹೂಡಿದ್ದು ಹೀಗೆ! ಈ ಸಂದರ್ಭದಲ್ಲಿ ಜನ ಗೇಲಿ ಮಾಡಿದರು. ಅಣ್ಣಂದಿರ ಜೊತೆ ತೆಪ್ಪಗೆ ಇರೋಕೆ ಆಗ್ತಿರಲಿಲ್ವಾ? ಬೇಕಿತ್ತಾ ಇದೆಲ್ಲಾ ನಿನಗೆ, ಎಂದು ಬೈದರು. ಆ ಮಾತುಗಳು ನನಗೆ ಕೇಳಿಸಲೇ ಇಲ್ಲ ಅಂದುಕೊಂಡು ಮೌನವಾಗಿ ಉಳಿದುಬಿಟ್ಟೆ.

ಈ ವೇಳೆಗೆ ನಾನೊಂದು ಸಂಗತಿಯನ್ನು ಗಮನಿಸಿದ್ದೆ. ಎಲ್ಲಾ ಹೆಸರಾಂತ ಕಂಪನಿಯ ಉತ್ಪನ್ನಗಳು ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಂಗಡಿಗಳನ್ನು ಮಾತ್ರ ತಲುಪುತ್ತಿದ್ದವು. ಹಳ್ಳಿಗಳಲ್ಲಿನ ಚಿಲ್ಲರೆ ಅಂಗಡಿಗಳಿಗೆ ಶಾಂಪೂವಿನಂಥ ಅಗತ್ಯ ವಸ್ತುಗಳು ತಲುಪುತ್ತಲೇ ಇರಲಿಲ್ಲ. ”ಚೆನ್ನಾಗಿ ಕಾಣಿಸಬೇಕು ಅಂತ ಬಡವರಿಗೂ ಆಸೆ ಇರ್ತದೆ ಕಣಯ್ಯಾ. ಅವರ ಕೈಗೆಟಕುವ ಬೆಲೆಗೆ ಉತ್ಪನ್ನ ಕೊಡಬೇಕು” ಎಂದಿದ್ದ ಅಪ್ಪನ ಮಾತು ಪದೇಪದೆ ನೆನಪಾಗುತ್ತಿತ್ತು. ಆ ದಿನಗಳಲ್ಲಿ ಒಂದು ಶಾಂಪೂ ಪ್ಯಾಕ್ ನ ಬೆಲೆ 7 ಎಂ.ಎಲ್ ಪ್ಯಾಕ್ ಗೆ 75 ಪೈಸೆ ಮತ್ತು 1 ರೂ. ಇತ್ತು. ಕೇವಲ 50 ಪೈಸೆಗೆ ಒಂದು ಪ್ಯಾಕ್ ಶಾಂಪೂ ನೀಡಿದರೆ ಹೇಗೆ ಎಂಬ ಯೋಚನೆ ಬಂದಿದ್ದೇ ಆಗ. ನಾನು ತಡ ಮಾಡಲಿಲ್ಲ. ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ತಂದೆ. 6 ಎಂ. ಎಲ್. ಶಾಂಪೂ ಹೊಂದಿದ್ದ ಪ್ಯಾಕ್ ಗಳನ್ನು ಪ್ರತಿ ಹಳ್ಳಿಯ ಕಿರಾಣಿ ಅಂಗಡಿಗಳಿಗೆ ತಲುಪಿಸಿದೆ. ಮಾರ್ಕೆಟ್ ಕಂಡುಕೊಳ್ಳುವ ಉದ್ದೇಶದಿಂದ, ಯಾವುದೇ ಬ್ರ್ಯಾಂಡ್ ನ 5 ಖಾಲಿ ಶಾಂಪೂ ಪ್ಯಾಕ್ ಕೊಟ್ಟರೆ, ಒಂದು ಚಿಕ್ ಶಾಂಪೂ ಪ್ಯಾಕ್ ಉಚಿತ ಎಂದು ಘೋಷಿಸಿದೆ. ಈ ಐಡಿಯಾ ನಿರೀಕ್ಷೆ ಮೀರಿ ಕ್ಲಿಕ್ ಆಯಿತು. ಉಚಿತವಾಗಿ ಸಿಗುವ ಶಾಂಪೂ ಪಡೆಯಲು ಜನ ಓಡೋಡಿ ಬಂದರು. ಸ್ವಲ್ಪ ದಿನಗಳ ನಂತರ, 5 ಚಿಕ್ ಶಾಂಪೂನ ಖಾಲಿ ಪ್ಯಾಕ್ ತಂದರೆ ಒಂದು ಚಿಕ್ ಶಾಂಪೂ ಪ್ಯಾಕ್ ಉಚಿತ ಎಂಬ ಆಫರ್ ಕೊಟ್ಟೆವು. ಆಗಂತೂ, ಚಿಕ್ ಶಾಂಪೂ ಖರೀದಿಗೆ ಹಳ್ಳಿಯ ಜನ ಮುಗಿಬಿದ್ದರು. ಅದುವರೆಗೂ ತಿಂಗಳಿಗೆ 35000 ಪ್ಯಾಕ್ ಗೆ ಇದ್ದ ಬೇಡಿಕೆ, ದಿಢೀರನೆ 12 ಲಕ್ಷಕ್ಕೆ ಏರಿತು! ಒಂದು ಪ್ಯಾಕ್ ಗೆ ಕೇವಲ 50 ಪೈಸೆ ಇದ್ದುದರಿಂದ ಶಾಂಪೂ ಖರೀದಿ ಯಾರಿಗೂ ಹೊರೆ ಅನ್ನಿಸಲಿಲ್ಲ.

ಒಬ್ಬರ ಯಶಸ್ಸನ್ನು ಕಂಡಾಕ್ಷಣ ಅವರನ್ನು ಟೀಕಿಸುವ ಜನ ಹುಟ್ಟಿಕೊಳ್ಳುತ್ತಾರೆ. ನಮ್ಮ ವಿಷಯದಲ್ಲೂ ಹೀಗೇ ಆಯಿತು. ‘ಚಿಕ್ ಶಾಂಪೂ ಚೆನ್ನಾಗಿಲ್ಲ. ಅದರಲ್ಲಿ ಯಾವುದೇ ವಿಟಮಿನ್ ನ ಅಂಶ ಇಲ್ಲ. ಸುವಾಸನೆಯೂ ಇಲ್ಲ’ ಎಂದು ಹಲವರು ಗಾಸಿಪ್ ಮಾಡಿದರು. ಆಗ, ಜನರ ವಿಶ್ವಾಸ ಗಿಟ್ಟಿಸಲು ನಾವೇನು ಮಾಡಿದೆವು ಗೊತ್ತೇ? ಒಂದು ದೊಡ್ಡ ತಂಡವನ್ನೇ ಕಟ್ಟಿ ಅವರನ್ನುತಮಿಳುನಾಡಿನ ಹಳ್ಳಿಹಳ್ಳಿಗೆ ಕಳಿಸಿದೆವು. ಪ್ರತಿ ಊರಿನ ಬಯಲಿನಲ್ಲಿ ಒಂದು ದಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸಿನೆಮಾವನ್ನು ಉಚಿತವಾಗಿ ತೋರಿಸುವುದು, ಇಂಟರ್ವಲ್ ಸಂದರ್ಭದಲ್ಲಿ ಚಿಕ್ ಶಾಂಪೂ ಕುರಿತ ಜಾಹೀರಾತು ಪ್ರದರ್ಶಿಸುವುದು, ಸಿನಿಮಾ ಮುಗಿದಾಗ ಎಲ್ಲರಿಗೂ ಎರಡೆರಡು ಪ್ಯಾಕ್ ಶಾಂಪೂ ಹಂಚುವುದು ಆ ತಂಡದ ಕೆಲಸವಾಗಿತ್ತು. ಇದರ ಜೊತೆಗೆ, ಮನೆಮನೆಗೆ ಉಚಿತವಾಗಿ ಸ್ಯಾಂಪಲ್ ನೀಡಿಕೆ, ಮನೆಯ ಗೋಡೆಗಳ ಮೇಲೆ ಚಿಕ್ ಶಾಂಪೂ ಕುರಿತ ಜಾಹೀರಾತು, ಸ್ಥಳದಲ್ಲೇ ಸ್ನಾನ ಮಾಡಿ ಶಾಂಪೂ ಗುಣಮಟ್ಟ ಪರೀಕ್ಷಿಸುವ ಮುಕ್ತ ಅವಕಾಶ ನೀಡಲಾಯಿತು. ಕಿರಾಣಿ ಅಂಗಡಿಯವರಿಗೆ ಚಿಕ್ಕಪುಟ್ಟ ಗಿಫ್ಟ್ ಕೊಟ್ಟು ಅವರನ್ನೂ ವಿಶ್ವಾಸಕ್ಕೆ ಪಡೆದಿದ್ದಾಯಿತು. ಇದರ ಹಿಂದೆಯೇ, ಆ ದಿನಗಳ ಪ್ರಖ್ಯಾತ ನಟಿ ಅಮಲಾ-” ನನ್ನ ಅನುಪಮ ಸೌಂದರ್ಯದ ಗುಟ್ಟು ಚಿಕ್ ಶಾಂಪೂ” ಎನ್ನುವ ಜಾಹೀರಾತೂ ಬಿಡುಗಡೆಯಾಯಿತು. ತಾವೂ ನಟಿ ಅಮಲಾರಂತೆಯೇ ಸುಂದರವಾಗಿ ಕಾಣಬೇಕೆಂಬ ಆಸೆಯಿಂದ ಜನ ಚಿಕ್ ಶಾಂಪೂಗಾಗಿ ಕ್ಯೂ ನಿಂತರು. ನೋಡನೋಡುತ್ತಲೇ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಚಿಕ್ ಶಾಂಪೂ ಮನೆಮಾತಾಯಿತು. ಅದರ ಬೆನ್ನಿಗೇ, ಅತಿಹೆಚ್ಚು ಮಾರಾಟವಾಗುವ ಶಾಂಪೂ ಎಂಬ ಹೆಸರು ಚಿಕ್ ಶಾಂಪೂಗೆ ದಕ್ಕಿತು. 50 ಪೈಸೆಯ ವ್ಯವಹಾರದ ಉದ್ಯಮ, 500 ಕೋಟಿಯ ಬಿಸಿನೆಸ್ ನತ್ತ ದಾಪುಗಾಲು ಇಟ್ಟಿತ್ತು.
**********
ಆ ನಂತರದಲ್ಲಿ ನಡೆದಿರುವುದೆಲ್ಲಾ ಯಶೋಗಾಥೆಯೇ. ಅದಕ್ಕೆಲ್ಲಾ ಕಾರಣ ನಮ್ಮ ನೌಕರರ ಶ್ರಮ, ಬದ್ಧತೆ. 1998ರಲ್ಲಿ ನಮ್ಮ ಕಂಪನಿಯ ಹೆಸರನ್ನು ಕೆವಿನ್ ಕೇರ್ ಎಂದು ಬದಲಿಸಿಕೊಂಡೆವು. ಶ್ರೇಷ್ಠ ಉದ್ಯಮಿಗಳನ್ನು ಗುರುತಿಸುವ ಫೋರ್ಬ್ಸ್ ಪಟ್ಟಿಯಲ್ಲಿ ನಮ್ಮ ಕಂಪನಿಯ ಹೆಸರು ಬಂತು. ಅತ್ಯಂತ ವೇಗವಾಗಿ ಬೆಳೆದ ಸ್ವದೇಶೀ ಉದ್ಯಮ ಎಂಬ ಹೆಗ್ಗಳಿಕೆಯೂ ನಮ್ಮದಾಯಿತು. ಈಗ ನಮ್ಮ ಕಂಪನಿಯಿಂದ ಶಾಂಪೂ, ಹೇರ್ ಆಯಿಲ್, ಹೇರ್ ವಾಶ್ ಪೌಡರ್, ಹೇರ್ ಕಲರ್, ಫೇರ್ ನೆಸ್ ಕ್ರೀಮ್, ಕೊಬ್ಬರಿ ಎಣ್ಣೆ, ಡಿಯೋಡರೆಂಟ್ ಇತ್ಯಾದಿ ವಸ್ತುಗಳು ತಯಾರಾಗುತ್ತವೆ. ಭಾರತ ಮಾತ್ರವಲ್ಲ, 23 ದೇಶಗಳಲ್ಲಿ ಕೆವಿನ್ ಕೇರ್ ಉತ್ಪನ್ನಗಳಿಗೆ ಬೇಡಿಕೆಯಿದೆ. ಇವತ್ತು ನಮ್ಮ ಕಂಪನಿ 1500 ಕೋಟಿ ರೂಪಾಯಿಗಳ ಟರ್ನ್ ಓವರ್ ಪಡೆದಿದೆ. ಯಾವುದೇ ವ್ಯವಹಾರ ಅಂದರೂ ಅಲ್ಲಿ ಪ್ರತಿಸ್ಪರ್ಧಿಯನ್ನು ಮಣ್ಣುಮುಕ್ಕಿಸಿಯೇ ಗೆಲ್ಲಬೇಕು ಎಂಬ ನಿಯಮವಿದೆ. ಅಂಥದೊಂದು ನಂಬಿಕೆಯನ್ನು ಸುಳ್ಳು ಮಾಡಿದ ಸಂತೃಪ್ತಿ ನಮ್ಮದು. ಪ್ರತಿಯೊಬ್ಬ ಉದ್ಯಮಿಯೂ ತನ್ನ ವ್ಯವಹಾರದಲ್ಲಿ ಸ್ವಲ್ಪ ಗ್ಯಾಪ್ ಬಿಟ್ಟಿರ್ತಾನೆ. ಒಂದಷ್ಟು ಜನರನ್ನು ನಿರ್ಲಕ್ಷ್ಯ ಮಾಡಿರುತ್ತಾನೆ. ಅದನ್ನು ಗಮನಿಸಿ ಅಲ್ಲಿ ವ್ಯವಹಾರ ಮಾಡಿದರೆ ಯಶಸ್ಸು ಕಾಣಬಹುದು! ಚಿಕ್ ಶಾಂಪೂ ವಿಷಯದಲ್ಲಿ ನಾವು ಮಾಡಿದ್ದು ಇದನ್ನೇ! ವೆಲ್ವೆಟ್ಟೆ ಶಾಂಪೂ ತಯಾರಿಸಿದ ನನ್ನ ಸೋದರರು ಒಂದು ರೂಪಾಯಿ ಕೊಡುವಂಥ ಗ್ರಾಹಕರನ್ನು ಹುಡುಕಿಕೊಂಡರು. ನಾನು 50 ಪೈಸೆ ಕೊಡುವಂಥ ಗ್ರಾಹಕರನ್ನು ಆಯ್ಕೆ ಮಾಡಿಕೊಂಡೆ! ಪರಿಣಾಮ; ಆ ಕಡೆ ಅವರ ಬಿಸಿನೆಸ್ ಗೂ ಹೊಡೆತ ಬೀಳಲಿಲ್ಲ, ನಮ್ಮ ಗೆಲುವಿಗೂ ಅಡ್ಡಿಯಾಗಲಿಲ್ಲ…

ಹೀಗೆ ಮುಗಿಯುತ್ತದೆ ರಂಗನಾಥನ್ ಅವರ ಮಾತು. 50 ಪೈಸೆಯಿಂದ ಶುರುವಾದ ವ್ಯವಹಾರ 500 ಕೋಟಿಯನ್ನು ದಾಟುವುದು ಅಂದರೆ ತಮಾಷೆಯೇ? ಹಳ್ಳಿಯ ಜನರಿಗೆ ರಜನಿಕಾಂತ್ ಸಿನೆಮಾಗಳನ್ನು ತೋರಿಸುತ್ತಲೇ ಈ ರಂಗನಾಥನ್ ಕೂಡ ರಜನಿಕಾಂತ್ ಥರಾನೇ ಬೆಳೆದಿದ್ದಾರೆ ಅನಿಸುವುದಿಲ್ಲವಾ?

 

PC: Manikanth AR