ಬರೋಬ್ಬರಿ 7 ಕೋಟಿ ರೂ. ಬಹುಮಾನ ಪಡೆದ ಸರ್ಕಾರಿ ಶಾಲೆ ಶಿಕ್ಷಕ..!

ಪುಣೆ: ಬರೋಬ್ಬರಿ 7.37 ಕೋಟಿ ರೂಪಾಯಿ ಬಹುಮಾನ ಸಹಿತ ಗ್ಲೋಬಲ್ ಟೀಚರ್ ಪ್ರೈಜ್ ಪಡೆದುಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ಶಿಕ್ಷಕ ರಂಜಿತ್ ಸಿನ್ಹಾ ದಿಸಾಳೆ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಶಿಫಾರಸು ಮಾಡಲಾಗುವುದು.

ಮಹಾರಾಷ್ಟ್ರ ಬಿಜೆಪಿ ನಾಯಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಪ್ರವೀಣ್ ದಾರೇಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೊಲ್ಲಾಪುರ ಜಿಲ್ಲೆಯಲ್ಲಿ ಶಿಕ್ಷಕ ದಿಸಾಳೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಮತ್ತು ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮಾತನಾಡಿ ದಿಸಾಳೆ ಹೆಸರನ್ನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಶಿಕ್ಷಕ ದಿಸಾಳೆ ಅವರನ್ನು ಗೌರವಿಸಲು ರಾಜ್ಯ ಸರ್ಕಾರಕ್ಕೆ ಕೋರಿ ನಿರ್ಣಯ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ, ಕ್ಯೂಆರ್ ಕೋಡ್ ಆಧಾರಿತ ಪಠ್ಯಪುಸ್ತಕಗಳ ರಚನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದಿಸಾಳೆ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಲಂಡನ್ ನ ವರ್ಕಿ ಫೌಂಡೇಶನ್ 7.37 ಕೋಟಿ ರೂಪಾಯಿ ಬಹುಮಾನ ಸಹಿತ ಜಾಗತಿ ಶಿಕ್ಷಕ ಪ್ರಶಸ್ತಿ ನೀಡಿದೆ. ಬಹುಮಾನದ ಮೊತ್ತದಲ್ಲಿ ಶೇಕಡ 50 ರಷ್ಟನ್ನು ಫೈನಲಿಸ್ಟ್ ಸಹವರ್ತಿಗಳೊಂದಿಗೆ ಹಂಚಿಕೊಳ್ಳುವುದಾಗಿ ದಿಸಾಳೆ ಘೋಷಿಸಿದ್ದಾರೆ.