ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ – ಮಹೀಂದ್ರಾ ಥಾರ್‌ ಮೈಲುಗಲ್ಲು

ಮುಂಬೈ: ಮಹೀಂದ್ರಾ ಕಂಪನಿಯ ಸ್ಫೋಟ್ಸ್‌ ಯುಟಿಲಿಟಿ ವೆಹಿಕಲ್‌ ಕಾರು ಥಾರ್ ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ ಕಂಡಿದೆ. ಅಕ್ಟೋಬರ್‌ 2 ರಂದು ಥಾರ್‌ ಬಿಡುಗಡೆಯಾಗಿದ್ದು ಈಗಾಗಲೇ 9 ಸಾವಿರ ಬುಕ್ಕಿಂಗ್‌ ಆಗಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

ಬಿಡುಗಡೆಯಾದ ಹೊಸ ಥಾರ್‌ 4*4 ಲೈಫ್‌ಸ್ಟೈಲ್‌ನಲ್ಲಿರುವ ಏಕೈಕ ಎಸ್‌ಯುವಿ. ಬುಕ್ಕಿಂಗ್‌ನಲ್ಲಿ ಕಡಿಮೆ ಅವಧಿಯಲ್ಲಿ ಹೊಸ ಮೈಲಿಗಲ್ಲು ಬರೆದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿಯ ಎಕ್ಸ್‌ ಶೋರೂಮ್‌ನಲ್ಲಿ ಹೊಸ ಥಾರ್‌ ಬೆಲೆ 9.80 ಲಕ್ಷ ರೂ. ನಿಗದಿಯಾಗಿದೆ. ಅಟೋ ತಜ್ಞರ ಮೆಚ್ಚುಗೆಗೆ ಥಾರ್‌ ಪಾತ್ರವಾಗಿದೆ. ಅ.2 ರಂದು ಬಿಡುಗಡೆಯಾದ ಬಳಿಕ 36 ಸಾವಿರ ಮಂದಿ ವಿಚಾರಣೆ ನಡೆಸಿದ್ದಾರೆ 3.3 ಲಕ್ಷ ಮಂದಿ ವೆಬ್‌ಸೈಟಿಗೆ ಭೇಟಿ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಆಫ್‌ ರೋಡ್‌ ಪ್ರಿಯರು ಈ ಕಾರನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, ಕನ್ವರ್ಟಬಲ್ ಟಾಪ್ , ಇನ್ಫೋಟೈನ್ಮೆಂಟ್ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಥಾರ್‌ನಲ್ಲಿದೆ. ಮಲೆಯಾಳಂ ನಟ ಪೃಥ್ವಿ ರಾಜ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸೇರಿದಂತೆ ಹಲವು ಗಣ್ಯರು ಮಹೀಂದ್ರ ಥಾರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್‌ಯುವಿ ವಿಭಾಗದಲ್ಲಿ 12 ದಿನದಲ್ಲಿ ಕಿಯಾ ಸೆಲ್ಟೋಸ್‌ ಕಾರಿಗೆ 12 ಸಾವಿರ ಬುಕ್ಕಿಂಗ್‌ ಆಗಿತ್ತು. ಇದೀಗ ಥಾರ್ ಕೇವಲ 4 ದಿನಕ್ಕೆ ಈ ಸಂಖ್ಯೆ ತಲುಪಿರುವುದು ವಿಶೇಷ. ಆರಂಭಿಕ ಹಂತದಲ್ಲಿ ಭಾರತದ 18 ನಗರಗಳಲ್ಲಿ ಥಾರ್ ಬಿಡುಗಡೆಯಾಗಿದೆ. ಅಕ್ಟೋಬರ್ 10ರೊಳಗಗೆ 100 ನಗರಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.