ದುಬೈನಿಂದ ಅತಿಯಾಗಿ ಚಿನ್ನ ತಂದು ಸಿಕ್ಕಿಬಿದ್ದ ಕೃಣಾಲ್‌ ಪಾಂಡ್ಯ!

ಮುಂಬೈ: ಟೀಮ್‌ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ, ದುಬೈನಲ್ಲಿ ಚಿನ್ನ ಖರೀದಿಸಿ ಭಾರತಕ್ಕೆ ಬಂದಾಗ ಅದಕ್ಕೆ ಸೂಕ್ತ ರೀತಿಯ ತೆರಿಗೆಗಳನ್ನು ಪಾವತಿಸದೆ ಕದ್ದು ಮುಚ್ಚಿ ಸಾಗಿಸುವ ಪ್ರಯತ್ನ ಮಾಡಿ ಆದಾಯ ಗುಪ್ತಚರ ಇಲಾಖೆಯ (ಡಿಆರ್‌ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಈ ಬಾರಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಅಂಗಣದಲ್ಲಿ ಆಯೋಜಿಸಲಾಗಿತ್ತು. ಮುಂಬೈ ಇಂಡಿಯನ್ಸ್‌ ತಂಡ ನವೆಂಬರ್‌ 10ರಂದು ದುಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್‌ ಜಯ ದಾಖಲಿಸಿ ದಾಖಲೆಯ ಐದನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತ್ತು.

ಇನ್ನು ಮುಂಬೈ ಇಂಡಿಯನ್ಸ್‌ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿದ ಬಳಿಕ ಟೀಮ್‌ ಇಂಡಿಯಾ ಆಟಗಾರರು ದುಬೈನಿಂದ ನೇರವಾಗಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಇನ್ನು ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದ ಆಟಗಾರರು ಭಾರತಕ್ಕೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಮುಂಬೈ ವಿಮಾನನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

ಕೃಣಾಲ್ ಗುರುವಾರ ಸಂಜೆ 5 ಗಂಟೆಯ ವಿಮಾನದಲ್ಲಿ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಅವರ ಬಳಿಕ ಅಘೋಷಿತ ಚಿನ್ನ ಮತ್ತು ಇತರ ಮೌಲ್ಯಯುತ ವಸ್ತುಗಳು ಇದ್ದ ಕಾರಣ ಡಿಆರ್‌ಐ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬಂದಿಲ್ಲ.

ಐಪಿಎಲ್‌ 2020 ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಕೃಣಾಲ್‌, ಆಡಿದ ಒಟ್ಟು 16 ಪಂದ್ಯಗಳಿಂದ ಬ್ಯಾಟಿಂಗ್‌ನಲ್ಲಿ 109 ರನ್‌ಗಳ ಕಾಣಿಕೆಯನ್ನಷ್ಟೇ ನೀಡಿ ಬೌಲಿಂಗ್‌ನಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದರು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಒಟ್ಟು 71 ಪಂದ್ಯಗಳನ್ನು ಆಡಿರುವ ಎಡಗೈ ಆಟಗಾರ ಕೃಣಾಲ್‌ 1000 ರನ್‌ ಮತ್ತು 46 ವಿಕೆಟ್‌ಗಳನ್ನು ಒಡೆದ ಸಾಧನೆ ಮಾಡಿದ್ದಾರೆ. 2017ರ ಐಪಿಎಲ್‌ ಫೈನಲ್‌ನಲ್ಲಿ ಮುಂಬೈ ತಂಡ ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ಎದುರು ಗೆದ್ದು ತನ್ನ 3ನೇ ಪ್ರಶಸ್ತಿ ಎತ್ತಿ ಹಿಡಿದಾಗ ಕೃಣಾಲ್ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು.

ದುಬೈನಿಂದ ಎಷ್ಟು ಚಿನ್ನ ತರಬಹುದು?
ನಿಯಮಗಳ ಪ್ರಕಾರ ದುಬೈನಿಂದ ಹಿಂದಿರುಗುವ ಭಾರತೀಯ ನಾಗರೀಕರು ಪುರುಷರಾದಲ್ಲಿ ಗರಿಷ್ಠ 20 ಗ್ರಾಮ್‌ ಚಿನ್ನವನ್ನು ಮೈಮೇಲೆ ಧರಿಸಬಹುದಾಗಿದೆ. ಇದರ ಮೌಲ್ಯ 50 ಸಾವಿರ ರೂ. ದಾಟಿರಬಾರದು. ಮತ್ತೊಂದೆಡೆ ಮಹಿಳೆಯರು 40 ಗ್ರಾಮ್‌ಗಿಂತಲೂ ಹೆಚ್ಚಿನ ಚಿನ್ನ ತೊಡುವಂತಿಲ್ಲ. ಇದರ ಮೌಲ್ಯ 1 ಲಕ್ಷ ರೂ. ದಾಟಿರಬಾರದು. ಇನ್ನು ಹೆಚ್ಚುವರಿ ಚಿನ್ನ ತೆಗೆದುಕೊಂಡು ಬಂದಿದ್ದೇ ಆದರೆ ಪ್ರತಿ ಚಿನ್ನದ ಗಣಿಗೆ ಅವರದ ಮೌಲ್ಯದ ಮೇಲೆ ಶೇ. 12.5ರಿಂದ 15.5ರಷ್ಟು (ಜಿಎಸ್‌ಟಿ ಸಹಿತ) ಸುಂಕ ತೆರಬೇಕಾಗುತ್ತದೆ.

ಈ ಸುಂಕ ಕಟ್ಟುವುದನ್ನು ತಪ್ಪಿಸಿ ಕದ್ದು ಮುಚ್ಚಿ ಚಿನ್ನ ಒಳತರುವ ಪ್ರಯತ್ನ ಮಾಡಿದರೆ ಪೊಲೀಸರ ಅತಿಥಿಯಾಗಬೇಕಾಗುತ್ತದೆ. ವಿದೇಶದಲ್ಲಿ 6 ತಿಂಗಳಿಗೂ ಹೆಚ್ಚು ಕಾಲ ಉಳಿದ ಭಾರತೀಯ ನಾಗರೀಕರಿಗೆ ದುಬೈನಿಂದ ಹಿಂದಿರುಗುವಾಗ ಸೂಕ್ತ ತೆರಿಗೆ ಪಾವತಿಸಿ ಚೆಕ್‌ಇನ್‌ ಬ್ಯಾಗ್‌ಗಳಲ್ಲಿ 1 ಕೆ.ಜಿ.ಯಷ್ಟು ಚಿನ್ನ ತರಲು ಅವಕಾಶವಿದೆ. ಅಳತೆ ಮೀರಿದರೆ ಅದಕ್ಕೆ ತಕ್ಕ ತೆರಿಗೆ ತೆರಬೇಕಾಗುತ್ತದೆ.