ಉತ್ತರ ಪ್ರದೇಶ ಸಿಎಂ ಬದಲಾವಣೆ ವದಂತಿ: ಮೋದಿ, ಶಾ ಭೇಟಿಯಾಗಲಿರುವ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸಿಎಂ ಬದಲಾವಣೆ ವದಂತಿ ಮತ್ತು ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಭಿನ್ನಮತ ಏರ್ಪಟ್ಟಿರುವುದರ ವರದಿಗಳ ಬೆನ್ನಲ್ಲಿ ಇಂದು ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರವರನ್ನು ಭೇಟಿಯಾಗಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೋವಿಡ್ ನಿಭಾಯಿಸಿದ್ದರ ಕುರಿತು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಹಲವು ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಭಿನ್ನಮತಕ್ಕೆ ಕಾರಣವಾಗಿದ್ದು ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ನಾಯಕತ್ವ ಬದಲಾವಣೆಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇತ್ತೀಚೆಗೆ ಯೋಗಿ ಆದಿತ್ಯನಾಥರ ಜನ್ಮದಿನಕ್ಕೆ ಮೋದಿಯವರು ಟ್ವೀಟ್‍ ಮಾಡಿ ಶುಭಾಶಯ ಕೋರಲಿಲ್ಲ ಮತ್ತು ಉತ್ತರಪ್ರದೇಶದ ಸರ್ಕಾರಿ ಜಾಹಿರಾತುಗಳಲ್ಲಿ ಕಳೆದ ವಾರದಿಂದ ಮೋದಿಯವರ ಭಾವಚಿತ್ರ ತೆಗೆದುಹಾಕಲಾಗಿದೆ. ಇವೆಲ್ಲವೂ ಭಿನ್ನಮತದ ಸ್ಪಷ್ಟ ಸಂಕೇತಗಳೆನ್ನಲಾಗಿದೆ.

ಕಳೆದ ವಾರವಷ್ಟೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‍ ಸಂತೋಷ್‍ ಮತ್ತು ಬಿಜೆಪಿ ಉಸ್ತುವಾರಿ ರಾಧಾ ಮೋಹನ್‍ ಸಿಂಗ್‍ ಲಕ್ನೋಗೆ ವಿಶೇಷ ಭೇಟಿ ನೀಡಿದ್ದರು. ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ಮಂತ್ರಿಗಳು ಮತ್ತು ಪಕ್ಷದ ಮುಖಂಡರೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದ್ದರು. ಅವರಿಬ್ಬರೂ ದೆಹಲಿ ತಲುಪಿ ಹಿರಿಯ ನಾಯಕರೊಂದಿಗೆ ಮಾತನಾಡಿದ ನಂತರ, ಭಾನುವಾರ ದಿಢೀರನೆ ರಾಧಾ ಮೋಹನ್‍ ಸಿಂಗ್‍ ಮರಳಿ ಲಕ್ನೋಗೆ ಬಂದು ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಸದ್ಯ ಯೋಗಿ ಮತ್ತು ನರೇಂದ್ರ ಮೋದಿಯವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಎನ್ನಲಾದ ಮಾಜಿ ಅಧಿಕಾರಿ ಎ.ಕೆ. ಶರ್ಮಾ ಅವರಿಗೆ ರಾಜ್ಯ ಸರ್ಕಾರದಲ್ಲಿ ಪ್ರಮುಖ ಪಾತ್ರ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಯೋಗಿಯವರ ಆಡಳಿತವನ್ನು ನಿಯಂತ್ರಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಬಹುದು ಎನ್ನಲಾಗಿದೆ.