IPL 2020: ವಿವಾದದಲ್ಲಿ IPL ಟೈಟಲ್ ಸಾಂಗ್

IPL 2020ಗೂ ವಿಘ್ನಗಳಿಗೂ ಎಲ್ಲಿಲ್ಲದ ನಂಟು ಇರುವಂತೆ ಭಾಸವಾಗುತ್ತಿದೆ. ಏಕೆಂದರೆ ಸೀಸನ್ 13 ಆರಂಭದಿಂದಲೂ ಒಂದಲ್ಲ ಒಂದು ಕಾರಣದಿಂದ ಐಪಿಎಲ್ ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದೆ. ಮಾರ್ಚ್​​ನಲ್ಲಿ ಆರಂಭವಾಗಬೇಕಿದ್ದ ಟೂರ್ನಿ ಕೊರೋನಾ ಕಾರಣದಿಂದ ಇದೀಗ ಸೆಪ್ಟೆಂಬರ್​ಗೆ ಬಂದು ನಿಂತಿದೆ. ಅದು ಕೂಡ ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದೇ. ಯುಎಇ ಗೆ ಬಂದು ಇಳಿಯುತ್ತಿದ್ದಂತೆ ಸಿಎಸ್​ಕೆ ತಂಡದ ಸದಸ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು ಆತಂಕ್ಕೀಡಾಗಿತ್ತು. ಇದೀಗ ಎಲ್ಲವೂ ಸರಿಯಾಯ್ತು ಇನ್ನೇನು ಟೂರ್ನಿ ಆರಂಭವಾಗಲು ದಿನಗಳು ಮಾತ್ರ ಉಳಿದಿವೆ ಅನ್ನುವಾಗಲೇ ಐಪಿಎಲ್ ಟೈಟಲ್ ಸಾಂಗ್ ವಿವಾದಕ್ಕೀಡಾಗಿದೆ.

ಹೌದು, ಸೆಪ್ಟೆಂಬರ್ 6 ರಂದು ಇಂಡಿಯನ್ ಪ್ರೀಮಿಯರ್ ಲೀಗ್​ನ ಭರ್ಜರಿ ರ್ಯಾಪ್ ಸಾಂಗ್ ಬಿಡುಗಡೆಯಾಗಿತ್ತು. ಪದಗಳ ಅಣಿಮುತ್ತುಗಳೊಂದಿಗೆ ರಿಲೀಸ್ ಆಗಿದ್ದ ಗೀತೆ ರಾತ್ರೋರಾತ್ರಿ ಹಿಟ್ ಆಗಿತ್ತು. ಆದರೀಗ ಆ ಹಾಡನ್ನು ಬೇರೊಂದು ಗೀತೆಯಿಂದ ಕಾಪಿ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ದೆಹಲಿ ಮೂಲದ ರ್ಯಾಪ್ ಫೇಮಸ್ ಸಿಂಗರ್ ಕೃಷ್ಣ ಕೌಲ್, ಐಪಿಎಲ್ ಟೈಟಲ್ ಸಾಂಗ್ ತಮ್ಮ ಹಾಡಿನಿಂದ ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ.

ಆಯೇಂಗೆ ವಾಪಿಸಿ ಹಮ್… ಸಾಹಿತ್ಯದ ಐಪಿಎಲ್ ಟೈಟಲ್ ಸಾಂಗ್, 2017 ರಲ್ಲಿ ರಿಲೀಸ್​ ಆಗಿದ್ದ ನನ್ನ ದೇಖಾ ಕೌನ್ ಆಯಾ ವಾಪಸ್…ಗೀತೆಯಿಂದ ಕದಿಯಲಾಗಿದೆ. ಅದೇ ಟ್ರ್ಯಾಕ್​ನ್ನು ಬಳಸಿ ಸಾಹಿತ್ಯ ಬದಲಿಸಿದ್ದಾರೆ ಎಂದು ಕೃಷ್ಣ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೃಷ್ಣ, ಎಲ್ಲರಿಗೂ ಈ ಬಗ್ಗೆ ರಿಟ್ವೀಟ್ ಮಾಡಿ ತಿಳಿಸುವಂತೆ ಕೇಳಿಕೊಂಡಿದ್ದಾರೆ.

ಹಾಡಿನಲ್ಲಿ ನನಗೆ ಕ್ರೆಡಿಟ್ ಕೊಡದೆ ಅಥವಾ ಒಪ್ಪಿಗೆ ಪಡೆಯದೇ ನನ್ನ ಟ್ರ್ಯಾಕ್ ಬಳಸಿದ್ದಾರೆ. ಇದು ಕೃತಿಚೌರ್ಯವಾಗಿದ್ದು, ಹೀಗಾಗಿ ಐಪಿಎಲ್ ಟೈಟಲ್ ಸಾಂಗ್ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಕೃಷ್ಣ ತಿಳಿಸಿದ್ದಾರೆ.