ಶೇನ್‌ವಾರ್ನ್‌ ಅಲ್ಲ, ಮುರಳಿಧರನ್‌ ಅಲ್ಲವೇ ಅಲ್ಲ..! : ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ ಹೆಸರಿಸಿದ ಅಫ್ರಿದಿ

ಹೊಸದಿಲ್ಲಿ:ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಶಾಹೀದ್‌ ಅಫ್ರಿದಿ ಅವರು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ ಹೆಸರಿಸಿದ್ದಾರೆ. ಇತರೆ ದೇಶಗಳನ್ನು ಬಿಟ್ಟು ತಮ್ಮ ದೇಶದ ಪರ ಆಡಿದ ಆಟಗಾರರನನ್ನೇ ಮಾಜಿ ನಾಯಕ ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಸ್ಪಿನ್ನರ್‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವ ದರ್ಜೆಯ ವೇಗಿಗಳು ಉತ್ಪಾದನೆಯಾಗುವುದರಲ್ಲಿ ಪಾಕಿಸ್ತಾನದ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಅದೇ ರೀತಿ ಸ್ಪಿನ್ನರ್‌ಗಳನ್ನು ಬೆಳೆಸುವುದರಲ್ಲಿಯೂ ಅಷ್ಟೇ ಖ್ಯಾತಿಯನ್ನು ಗಳಿಸಿದೆ. ವಾಸಿಮ್ ಅಕ್ರಮ್, ವಖಾರ್‌ ಯೂನಿಸ್, ಇಮ್ರಾನ್ ಖಾನ್, ಆಕಿಬ್ ಜಾವೇದ್, ಸರ್ಫರಾಜ್‌ ನವಾಜ್, ಉಮರ್ ಗುಲ್ ಮತ್ತು ಶೋಯೆಬ್ ಅಖ್ತರ್ ಅವರಂತಹ ಗುಣಮಟ್ಟದ ಸ್ವಾಭಾವಿಕ ಸೀಮಿರ್‌ಗಳನ್ನು ಬೆಳೆಸುವಲ್ಲಿ ಪಾಕಿಸ್ತಾನ ಕ್ರಿಕೆಟ್‌ ಹೆಮ್ಮೆ ಪಡುತ್ತದೆ.

ವೇಗದ ಬೌಲರ್‌ಗಳ ಜತೆಗೆ, ಪಾಕಿಸ್ತಾನ, ವಿಶ್ವ ಶ್ರೆಷ್ಠ ಸ್ಪಿನ್ನರ್‌ಗಳನ್ನು ಉತ್ಪಾದನೆಯಲ್ಲಿಯೂ ಕೂಡ ಹೆಸರು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಯಾಸೀರ್‌ ಶಾ ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಂಚೂಣಿ ಸ್ಪಿನ್ನರ್‌ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಈ ಹಿಂದೆ ಪಾಕಿಸ್ತಾನವು ಮುಷ್ತಾಕ್ ಅಹ್ಮದ್, ಸಕ್ಲೈನ್ ಮುಷ್ತಾಕ್, ಸಯೀದ್ ಅಜ್ಮಲ್, ಅಬ್ದುರ್ ರೆಹಮಾನ್ ಮತ್ತು ದನೀಶ್‌ ಕನೇರಿಯಾ ಅವರಂಥ ವಿಶ್ವ ದರ್ಜೆಯ ಸ್ಪಿನ್ನರ್‌ಗಳನ್ನು ಹೊಂದಿತ್ತು. ವಾಸ್ತವವಾಗಿ, ಶಾಹಿದ್ ಅಫ್ರಿದಿ ಕೂಡ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು, ತವರು ಸೇರಿದಂತೆ ವಿದೇಶಿ ನೆಲಗಳಲ್ಲೂ ಸರಾಗವಾಗಿ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಅವರಲ್ಲಿತ್ತು. ಓಡಿಐ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅವರು ಕ್ರಮವಾಗಿ 393 ಮತ್ತು 97 ವಿಕೆಟ್‌ಗಳನ್ನು ಪಡೆದಿದ್ದಾರೆ. ಸೀಮಿತ ಓವರ್‌ಗಳ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಸ್ಪಿನ್ನರ್‌ ಅವರಾಗಿದ್ದಾರೆ.

ಟ್ವಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಶಾಹೀದ್ ಅಫ್ರಿದಿಗೆ ಹಿಂಬಾಲಕರೊಬ್ಬರು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ ಯಾರೆಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಅಫ್ರಿದಿ ಪಾಕಿಸ್ತಾನದ ಮಾಜಿ ಲೆಗ್‌ ಸ್ಪಿನ್ನರ್‌ ಅಬ್ದುಲ್‌ ಖಾದಿರ್‌ ಎಂದು ಹೇಳಿದರು. ಶೇನ್‌ವಾರ್ನ್‌ಗಿಂತಲೂ ಅಬ್ದುಲ್‌ ಖಾದಿರ್‌ ಶ್ರೇಷ್ಠ ಸ್ಪಿನ್ನರ್‌ ಎಂದು ಗುರುತಿಸಿದರು.

ಅಬ್ದುಲ್‌ ಖಾದಿರ್‌ 236 ಟೆಸ್ಟ್ ಹಾಗೂ 132 ಓಡಿಐ ವಿಕೆಟ್‌ಗಳನ್ನು ಪಡೆದಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ಆಯ್ಕೆದಾರ ಲಾಹೋರ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದರು.