ಬಿಹಾರ ಚುನಾವಣಾ ಫಲಿತಾಂಶ: ಬಾಲಿವುಡ್​ ನಟ ಸೋನು ಸೂದ್ ಕುತೂಹಲಕಾರಿ ಹೇಳಿಕೆ!​

ನವದೆಹಲಿ: ಮಹಾಮಾರಿ ಕರೊನಾ ವೈರಸ್​ನಿಂದಾಗಿ ರಾಷ್ಟ್ರವ್ಯಾಪಿ ದಿಢೀರ್​ ಘೋಷಣೆಯಾದ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಬಾಲಿವುಡ್​ ನಟ ಸೋನು ಸೂದ್​ ನಿಜವಾದ ಹೀರೋ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬುಧವಾರ ಬಿಹಾರ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು ಬಿಹಾರದ ಜನರ ಏನೋ ಉತ್ತಮವಾದುದ್ದನ್ನು ನೋಡುತ್ತಿರಬೇಕು. ಭಾರತೀಯರು ಸಾಕಷ್ಟು ಭರವಸೆ ಹೊಂದಿರುವವರಾಗಿದ್ದು, ಕೆಲವೊಮ್ಮೆ ಎರಡನೇ ಅವಕಾಶವನ್ನು ಕೊಟ್ಟು ನೋಡುತ್ತಾರೆ. ಅದು ಮೂರನೇ ಅವಕಾಶವೂ ಆಗಿರಬಹುದು. ತಮ್ಮ ಜೀವನ ಉತ್ತಮ ಹಂತಕ್ಕೆ ಬರಬೇಕೆಂಬುದೇ ಜನರ ಆಶಯವಾಗಿದೆ ಎಂದು ಸೋನು ಹೇಳಿದರು.

ಇನ್ನು ಸೋನು ಸೋದ್​ ನಮ್ಮ ನಡುವಿನ ನಿಜವಾದ ನಾಯಕನೆಂದರೆ ತಪ್ಪಾಗಲಾರದು. ಬಿಹಾರ ಹಾಗೂ ಉತ್ತರ ಪ್ರದೇಶದ ಸಾಕಷ್ಟು ಕೆಲಸಗಾರರು ಲಾಕ್​ಡೌನ್​ ಸಮಯದಲ್ಲಿ ತಮ್ಮ ಊರುಗಳಿಗೆ ತೆರಳಲು ಮುಂಬೈನಿಂದ ಬಸ್​ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಈ ಬಗ್ಗೆ ಮಾತನಾಡಿರುವ ಅವರು ನಾನು ಬಿಹಾರದ ಸಾಕಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಶಿಕ್ಷಣ ಅಥವಾ ಮೂಲಭೂತ ಸೌಕರ್ಯ ವಿಚಾರಕ್ಕೆ ಬಂದರೆ ಬಿಹಾರಿಗಳು ತುಂಬಾ ವಂಚಿತರಾಗಿದ್ದಾರೆಂದು ತಿಳಿಸಿದರು.

ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಅದು ಮುಖ್ಯವಲ್ಲ. ಐದು ವರ್ಷಗಳ ಬಳಿಕ ಬಿಹಾರ ಯಾವ ರೀತಿ ಬದಲಾಗಲಿದೆ ಎಂಬುದಷ್ಟೇ ಮುಖ್ಯ. ತಾವು ಯಾವುದರ ಮೇಲೆ ನಂಬಿಕೆ ಇಟ್ಟಿದ್ದಾರೋ ಅದನ್ನು ನೀಡಿದ ಸರ್ಕಾರದ ಮೇಲೆ ಜನರು ಹೆಮ್ಮೆ ಪಡಬೇಕೆಂದು ಹೇಳಿದರು.

ಮಂಗಳವಾರ 8 ಗಂಟೆಗೆ ಆರಂಭವಾಗಿ 18 ಗಂಟೆಗಳವರೆಗೆ ನಡೆದ ಮತಎಣಿಕೆಯ ಜಿದ್ದಾಜಿದ್ದಿಯಲ್ಲಿ 243 ಕ್ಷೇತ್ರಗಳ ಪೈಕಿ ಬಿಜೆಪಿ 74, ಜೆಡಿಯು 43, ಎಚ್​ಎಎಂ 4, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4, ಎಲ್​ಜೆಪಿ 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆರ್​ಜೆಡಿ 75 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೈತ್ರಿಕೂಟ ನಿರೀಕ್ಷಿತ ಸರಳ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಕಾರಣ ಪ್ರತಿಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ 19, ಎಐಎಂಇಐಎಂ 5, ಎಡರಂಗ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.

ಎನ್​ಡಿಎಗೆ ಸ್ಪಷ್ಟ ಬಹುಮತ ದೊರೆತಿರುವುದರಿಂದ ಮತ್ತೊಮ್ಮೆ ಜೆಡಿಯು ಸಂಸ್ಥಾಪಕ ನಿತೀಶ್​ ಕುಮಾರ್​ ಬಿಹಾರದ ಗದ್ದುಗೆ ಏರುತ್ತಿದ್ದಾರೆ. ಬಿಹಾರ ಫಲಿತಾಂಶವನ್ನು ಪ್ರಜಾಪ್ರಭುತ್ವದ ಗೆಲುವು ಎಂದು ವ್ಯಾಖ್ಯಾನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಬಿಹಾರದ ಫಲಿತಾಂಶದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.