ಶಬರಿಮಲೆ ಯಾತ್ರೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಮಹತ್ವವೇನು?

ಪ್ರತಿ ಬಾರಿ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಅಯ್ಯಪ್ಪ ಸ್ವಾಮಿ ಭಕ್ತರ ಸಂಭ್ರಮ ಮುಗಿಲುಮುಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೆರಳಿ ದೇವರ ಸಾನ್ನಿಧ್ಯದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವ ಗಳಿಗೆಗಾಗಿ ಅವರು ಕಾಯುತ್ತಿರುತ್ತಾರೆ. ಕೇರಳ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದಲೂ ಅಯ್ಯಪ್ಪ ಸ್ವಾಮಿಗೆ ಲಕ್ಷಾಂತರ ಭಕ್ತರಿದ್ದಾರೆ.

ಈ ವರ್ಷ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಮಕರ ಸಂಕ್ರಾಂತಿಯಂದು ‘ಮಕರ ವಿಳಕ್ಕು’ ದರ್ಶನಕ್ಕೆ ಭಕ್ತರಿಗೆ ಈ ಹಿಂದೆ ನೀಡುತ್ತಿದ್ದಂತೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. 41 ದಿನಗಳ ಕಠಿಣ ವ್ರತ ನಡೆಸಿ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ ಮಕರ ಜ್ಯೋತಿ ದರ್ಶನ ಮಾಡಿದರೆ ಜನ್ಮ ಸಾರ್ಥಕವಾಗಲಿದೆ ಎಂಬ ನಂಬಿಕೆ ಭಕ್ತರದು. ಹೀಗೆ ಪ್ರತಿ ವರ್ಷವೂ ಸಾವಿರಾರು ಭಕ್ತರು ಚಾಚೂ ತಪ್ಪದೆ ಅಯ್ಯಪ್ಪನ ಸಾನ್ನಿಧ್ಯಕ್ಕೆ ತೆರಳುತ್ತಾರೆ.

ಭಕ್ತಿ ಎನ್ನುವುದು ಇಲ್ಲಿ ಪ್ರಧಾನವಾಗಿ ಕಂಡರೂ ಅಯ್ಯಪ್ಪ ಸ್ವಾಮಿ ಸಾನ್ನಿಧ್ಯ ಭಾರತದ ಜಾತ್ಯತೀತ ಪರಿಕಲ್ಪನೆಗೆ ಬೃಹತ್ ಆಸರೆಯೂ ಹೌದು ಎನ್ನುವುದು ಸತ್ಯ. ಭಕ್ತಿಯ ಜತೆಗೆ ಇದು ಸಾಮಾಜಿಕ ಮಹತ್ವವನ್ನೂ ಪಡೆದುಕೊಂಡಿದೆ. ಏಕೆಂದರೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸುವ ಪ್ರತಿಯೊಬ್ಬರೂ ಅಯ್ಯಪ್ಪನ ಭಕ್ತರೇ ಆಗಿರುತ್ತಾರೆ. ಪ್ರತಿಯೊಬ್ಬರ ಪಾಲಿಗೂ ಅವರು ‘ಸ್ವಾಮಿ’. ವಿಶೇಷವೆಂದರೆ ಇವರೆಲ್ಲರೂ ಜತೆಗೂಡಿ ಮನೆಯಿಂದ ದೂರ ಇದ್ದು, ತಮ್ಮ ಆಹಾರ ತಾವೇ ತಯಾರಿಸುವಾಗ ಯಾವುದೇ ಮೇಲು-ಕೀಳು ಜಾತಿಗಳು ಬರುವುದಿಲ್ಲ. ಅಷ್ಟರಮಟ್ಟಿಗೆ ಅಯ್ಯಪ್ಪ ಸ್ವಾಮಿಯ ಭಕ್ತಿ ಜಾತ್ಯತೀತತೆಯ ಮೌಲ್ಯವನ್ನು ಬಿತ್ತುತ್ತದೆ. ಮುಂದೆ ಓದಿ.

ಏಕತೆ, ಸಹಬಾಳ್ವೆಯ ಮಂತ್ರ

ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರು ಅಲ್ಲಿನ ಬೆಟ್ಟದ ಭಾಗಗಳಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಯೇ ಆಹಾರ ತಯಾರಿಸಿ ಸೇವಿಸುತ್ತಾರೆ. ಇಲ್ಲಿ ತಯಾರಿಸುವುದು ಊಟ ಆಗಿರುವುದಿಲ್ಲ. ಆ ಪವಿತ್ರ ಪ್ರದೇಶದಲ್ಲಿ ಭಕ್ತರ ಪಾಲಿಗೆ ಇದು ಪ್ರಸಾದ, ಹಾಗೆಯೇ ಇಲ್ಲಿ ಸೇರಿಕೊಳ್ಳುವ ನಾನಾ ಭಾಷೆ, ಜಾತಿಯ ಭಕ್ತರು ಯಾವುದೇ ತಾರತಮ್ಯವಿಲ್ಲದೆ ಜತೆಗೂಡುತ್ತಾರೆ. ಒಬ್ಬರು ತಯಾರಿಸಿದ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಾರೆ. ಹೀಗೆ ಶಬರಿಮಲೆ ಏಕತೆ, ಜಾತ್ಯತೀತತೆ, ಸಹಬಾಳ್ವೆಯ ಮೂಲತತ್ವಗಳನ್ನು ಸಾರುವ ಕ್ಷೇತ್ರ.

ಕಠಿಣ ವ್ರತ ಪಾಲಿಸುವ ಭಕ್ತರು
ಶಬರಿಮಲೆಗೆ ತೆರಳಲು ಮಾಲೆ ಧರಿಸುವ ಹರಕೆ ಹೊತ್ತವರು ಅತ್ಯಂತ ಕಠಿಣ ವ್ರತವನ್ನು ಪಾಲಿಸುತ್ತಾರೆ. ಕಾಲಿಗೆ ಚಪ್ಪಲಿ ಧರಿಸದೆ, ಬೆಳಿಗ್ಗೆ ಮುಂಚೆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡುತ್ತಾರೆ. ಐಷಾರಾಮಿ ಜೀವನ ಹಾಗೂ ಸೌಲಭ್ಯಗಳಿಂದ ದೂರ ಇರುತ್ತಾರೆ. ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಹಾಸಿಗೆ ಮೇಲೆ ಮಲಗುವಂತಿಲ್ಲ. ಕುಟುಂಬದವರ ಸಂಪರ್ಕದಿಂದ ಆದಷ್ಟು ದೂರವೇ ಇರುತ್ತಾರೆ. ಯಾವುದೇ ದುಶ್ಚಟಗಳಿದ್ದರೂ ಈ ಸಮಯದಲ್ಲಿ ಅದನ್ನು ಕೈಬಿಡುತ್ತಾರೆ. ಅನೇಕರು ದುಶ್ಚಟಗಳಿಂದ ಮುಕ್ತರಾಗಲೆಂದೇ ಹರಕೆ ಹೊರುತ್ತಾರೆ. ಹರಕೆ ಹೊತ್ತವರು ಯಾವುದೇ ರೀತಿಯ ಕೆಟ್ಟ ಕೆಲಸಗಳಲ್ಲಿ ತೊಡಗುವಂತಿಲ್ಲ. ಇದೆಲ್ಲವೂ ಒಬ್ಬ ವ್ಯಕ್ತಿಯನ್ನು ಭಕ್ತಿ ಮಾರ್ಗದಲ್ಲಿ ಸಜ್ಜನನ್ನಾಗಿಸುವ ಸದುದ್ದೇಶವನ್ನೂ ಹೊಂದಿದೆ.

ಗುರುಸ್ವಾಮಿಯ ಗೌರವ

ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ತೆರಳುವ ದೇವಸ್ಥಾನಕ್ಕೆ 18 ಮೆಟ್ಟಿಲುಗಳಿವೆ. ಒಂದು ಮೆಟ್ಟಿಲಿಗೆ ಒಂದು ವರ್ಷದಂತೆ 18 ವರ್ಷ ಯಾತ್ರೆ ಕೈಗೊಂಡ ಭಕ್ತರು ಗುರುಸ್ವಾಮಿ ಎಂಬ ಗೌರವ ಪಡೆದುಕೊಳ್ಳುತ್ತಾರೆ. ಹೊಸದಾಗಿ ಹರಕೆ ಹೊತ್ತವರಿಗೆ ನಿಯಮ ಮತ್ತು ವ್ರತ ಪಾಲನೆಗೆ ಮಾರ್ಗದರ್ಶನ ನೀಡುವುದು, ಶಬರಿಮಲೆ ಯಾತ್ರೆಗೆ ಭಕ್ತರನ್ನು ತಮ್ಮೊಂದಿಗೆ ಕರೆದೊಯ್ಯುವ ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಾರೆ.

ಮುಸ್ಲಿಮರೂ ಬರುತ್ತಾರೆ
ಮುಸ್ಲಿಮರೂ ಬರುತ್ತಾರೆ
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋದವರು ಮಕರ ಜ್ಯೋತಿಯ ದರ್ಶನ ಪಡೆಯುವುದು ತಮ್ಮ ಪುಣ್ಯ ಎಂದು ಭಾವಿಸುತ್ತಾರೆ. ಅಯ್ಯಪ್ಪನ ಸನ್ನಿಧಾನದ ಪೂರ್ವಭಾಗದಲ್ಲಿ ಅಯ್ಯಪ್ಪನ ಅನುಯಾಯಿಯಾಗಿ ಪರಿವರ್ತನೆಗೊಂಡ ಮುಸ್ಲಿಂ ವ್ಯಕ್ತಿ ವಾವರನಿಗೆ ಮೀಸಲಾಗಿರುವ ಜಾಗವೊಂದಿದೆ. ಅದನ್ನು ‘ವಾವರುನಾಡ’ ಎಂದು ಕರೆಯಲಾಗುತ್ತದೆ. ಇಲ್ಲಿಗೆ ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಭೇಟಿ ನೀಡುವುದು ವಿಶೇಷ.